ನವಲಗುಂದ : ಪಶುಸಂಗೋಪನೆ ಮತ್ತು ಹೈನುಗಾರಿಕೆ ಚಟುವಟಿಕೆಗಳಿಗೆ ಆಧಾರವಾಗಿ ಕೆಲಸ ಮಾಡಬೇಕಿರುವ ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆಗೆ ಸ್ವಂತ ಕಟ್ಟಡವಿಲ್ಲದೇ, ಅದರೊಂದಿಗೆ ಇಲಾಖೆ ಸಿಬ್ಬಂದಿಯೂ ಇಲ್ಲದೆ ವೈದ್ಯರು, ಸಿಬ್ಬಂದಿಗಳು, ಜಾನುವಾರುಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಎಸ್... ನವಲಗುಂದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪಶು ಆಸ್ಪತ್ರೆ ಸ್ವಂತ ಕಟ್ಟಡವಿಲ್ಲದೆ, ಖಾಸಗಿ ಟ್ರಸ್ಟ್ ಜಾಗದಲ್ಲಿ ಇದೆ. ಸಿಬ್ಬಂದಿ ಕೊರತೆ ಸಹ ಇಲ್ಲಿದೆ. ಪಶು ಸಂಗೋಪನೆ ಇಲಾಖೆಗೆ ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಒಟ್ಟು 46 ಹುದ್ದೆಗಳಲ್ಲಿ ಕೇವಲ 16 ಹುದ್ದೆಗಳು ಭರ್ತಿಯಾಗಿದ್ದು, ಇನ್ನುಳಿದ 29 ಹುದ್ದೆಗಳು ಖಾಲಿ ಇವೆ. ಇದರಿಂದ ಇಲಾಖೆ ಯಾವುದೇ ಕಾರ್ಯ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಪಶು ಸಂಗೋಪನೆ ಇಲಾಖೆ ಇದ್ದೂ ಇಲ್ಲದ ಹಾಗೆ ಕಾರ್ಯ ನಿರ್ವಹಿಸುತ್ತಿದೆ. ಕೇವಲ 16 ಹುದ್ದೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ, ಸಂಪೂರ್ಣ ತಾಲೂಕು ನೋಡಿಕೊಳ್ಳುತ್ತಿದ್ದಾರೆ. ಜಾನುವಾರುಗಳಿಗೆ ಹರಡುವ ರೋಗಕ್ಕೆ ಚಿಕಿತ್ಸೆ ಬೇಕಾದಲ್ಲಿ ವೈದ್ಯರನ್ನು ಹುಡುಕುತ್ತಾ ಸಾಗಬೇಕಾಗಿದೆ. ಇದರಿಂದ ನೇರವಾಗಿ ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್
Kshetra Samachara
06/10/2022 10:46 pm