ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಕೊರೊನಾ ಹೊಡೆತಕ್ಕೆ ಜಗತ್ತೇ ತತ್ತರಿಸಿದೆ. ಕೊರೊನಾ ರೋಗಿಗಳ ಆರೈಕೆಗಾಗಿ ಸರ್ಕಾರ ಹರಸಾಹಸ ಪಡುತ್ತಿದೆ. ಇದರ ನಡುವೆ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಗೆ ಬೇಕಾದ ಬೆಡ್ ಗಳ ಕೊರತೆ ಕಾಡುತ್ತಿದ್ದು, ಗರ್ಭಿಣಿಯರಿಗೂ ಕೊರೊನಾ ಆತಂಕ ಎದುರಾಗಿದೆ.
ಇಲ್ನೋಡಿ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಹಾಕಲಾಗಿರೋ ಬೆಡ್ ಗಳು, ಬೆಡ್‌ಗಳ ಮೇಲೆ ಸಾಮಾಜಿಕ ಅಂತರ ಮರೆತು ಕುಳಿತಿರುವ ಗರ್ಭಿಣಿಯರು, ಇಂತಹ ದೃಶ್ಯಗಳು ಪ್ರತಿನಿತ್ಯ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ನೋಡಲು ಸಿಗುತ್ತವೆ.
ಧಾರವಾಡದ ಈ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗಾಗಿ ಕೇವಲ 25 ರಿಂದ 30 ಬೆಡ್ ಗಳನ್ನು ಮಾತ್ರ ಮೀಸಲಿಡಲಾಗಿದೆ. ಪ್ರತಿನಿತ್ಯ ಈ ಆಸ್ಪತ್ರೆಗೆ 75-80 ಜನ ಗರ್ಭಿಣಿಯರು ಹೆರಿಗೆಗೆಂದು ಬಂದು ದಾಖಲಾಗುತ್ತಾರೆ. ಧಾರವಾಡ ಅಷ್ಟೇ ಅಲ್ಲದೇ ಧಾರವಾಡ ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳ ಗರ್ಭಿಣಿಯರು ಕೂಡ ಕೆಲವೊಮ್ಮೆ ಇದೇ ಆಸ್ಪತ್ರೆಗೆ ಬಂದು ದಾಖಲಾಗುತ್ತಾರೆ. ಆದರೆ, ಅವರೆಲ್ಲರಿಗೂ ಬೆಡ್ ಗಳನ್ನು ಪೂರೈಕೆ ಮಾಡಲು ಜಿಲ್ಲಾ ಆಸ್ಪತ್ರೆಗೆ ಆಗುತ್ತಿಲ್ಲ.
ಕೊರೊನಾ ಆತಂಕದಿಂದಾಗಿ ಸರ್ಕಾರ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೇಳುತ್ತದೆ. ಆದರೆ, ಗರ್ಭಿಣಿಯರಿಗೆ ಬೆಡ್ ಕೊರತೆಯಿಂದಾಗಿ ಇಲ್ಲಿ ಸಾಮಾಜಿಕ ಅಂತರ ಮರೆಯಾಗಿದ್ದು, ಒಂದೇ ಬೆಡ್ ನಲ್ಲಿ ಇಬ್ಬರು ಗರ್ಭಿಣಿಯರನ್ನು ಹಾಕುತ್ತಿದ್ದೇವೆ ಎಂದು ವೈದ್ಯರೇ ಅಸಹಾಯಕತೆ ತೋರುತ್ತಿರೋದು ದುರ್ದೈವದ ಸಂಗತಿಯೇ ಸರಿ.
Kshetra Samachara
19/11/2020 10:02 pm