ಹುಬ್ಬಳ್ಳಿ: ಅವರೆಲ್ಲ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಶ್ರಮಿಕರು. ಬೇರೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಇವರ ಆರೋಗ್ಯದ ಬಗ್ಗೆ ಮಾತ್ರ ಯಾರಿಗೂ ಕಾಳಜಿ ಇಲ್ಲ. ಸರ್ಕಾರದ ಅಧಿಕಾರಿಗಳಂತೂ ಈ ಬಗ್ಗೆ ತಲೆಯನ್ನೇ ಕಡೆಸಿಕೊಳ್ಳುತ್ತಿಲ್ಲ. ಹಾಗಿದ್ದರೇ ಯಾರು ಆ ಶ್ರಮಿಕರು ಅಂತೀರಾ ಇಲ್ಲಿದೆ ನೋಡಿ ಸ್ಟೋರಿ...
ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಕಷ್ಟವನ್ನು ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ. ಹೌದು.. ಕಿಲ್ಲರ್ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್,ಸೀಲ್ ಡೌನ್ ಆಗಿದ್ದ ಸಂದರ್ಭದಲ್ಲಿ ಕೂಡ ಯಾವುದೇ ಅಂಜಿಕೆಯಿಲ್ಲದೆ ಕರ್ತವ್ಯ ನಿರ್ವಹಿಸಿದ್ದ ಪಾಲಿಕೆ ಪೌರಕಾರ್ಮಿಕರು ಹಾಗೂ ಗುತ್ತಿಗೆ ಪೌರಕಾರ್ಮಿಕರ ಕೊರೋನಾ ವಾರಿಯರ್ಸ್ ಗಳಾಗಿ ಹೊರಹೊಮ್ಮಿದ್ದರು. ಆದರೆ ಈ ವಾರಿಯರ್ಸ್ ಜೀವಕ್ಕೆ ಮಾತ್ರ ಕಿಂಚಿತ್ತೂ ಬೆಲೆಯೇ ಇಲ್ಲವಾಗಿದೆ. ಪರಿಸರವನ್ನು ಸ್ವಚ್ಚವಾಗಿಡಲು ಶ್ರಮಿಸುವ ಇವರಿಗೆ ಪಾಲಿಕೆಯಿಂದ ಹಾಗೂ ಸರ್ಕಾರದಿಂದ ಸಮರ್ಪಕವಾದ ರಕ್ಷಣಾ ಸಾಮಾಗ್ರಿಗಳು ಸಿಗದೆ ಇರುವುದು ಪೌರಕಾರ್ಮಿಕರ ಸಂಕಷ್ಟಕ್ಕೆ ಕಾರಣವಾಗಿದೆ.
ಪೌರಕಾರ್ಮಿಕರಿಗೆ ರಕ್ಷಣಾ ಸಾಮಗ್ರಿಗಳಾದ ಹ್ಯಾಂಡ್ ಗ್ಲೌಸ್, ಶೂ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಒದಗಿಸುವಂತೆ ಸರ್ಕಾರ ಲಕ್ಷಾಂತರ ರೂಪಾಯಿ ಅನುದಾನವನ್ನು ನೀಡುತ್ತದೆ. ಆದರೆ ಕೊರೋನಾದ ಸಂದಿಗ್ಧ ಸಮಯದಲ್ಲಿಯೂ ಕೂಡ ಪೌರಕಾರ್ಮಿಕರಿಗೆ ರಕ್ಷಣಾ ಸಾಮಗ್ರಿಗಳು ಸಿಗದೇ ಇರುವುದು ಎಷ್ಟರಮಟ್ಟಿಗೆ ಸರಿ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಇನ್ನೂ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಶ್ರಮಿಕರು ಮಾತ್ರ ಜೀವದ ಬಗ್ಗೆ ಕಾಳಜಿ ಮರೆತು ಕರ್ತವ್ಯ ನಿರ್ವಹಿಸಬೇಕಾಗಿದೆ.
ಒಟ್ಟಿನಲ್ಲಿ ಪೌರಕಾರ್ಮಿಕರ ಕಷ್ಟದ ಬಗ್ಗೆ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮಾತ್ರ ಯಾವುದೇ ಕಾಳಜಿಯೇ ಇಲ್ಲದಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.
ಮಲ್ಲೇಶ ಸೂರಣಗಿ,
ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
10/08/2021 01:35 pm