ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಷ್ಟ್ರಧ್ವಜ ತಯಾರಿಕೆಗೆ ಕೇಂದ್ರದ ಹೊಸ (ಅ)ನೀತಿ!; ಖಾದಿ ನೇಕಾರರು ತತ್ತರ, ಹೋರಾಟ ಸಿದ್ಧತೆ

ಹುಬ್ಬಳ್ಳಿ: ನಮ್ಮ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ.‌ ಬೇಕಾದ ಬಟ್ಟೆಯಲ್ಲಿ ಧ್ವಜ ತಯಾರಿಸಿ ಎಂದಿದೆ. ಇದರಿಂದಾಗಿ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದರೆ, ಕೈಮಗ್ಗಗಳಿಗೆ ಬೀಗ ಜಡಿಯುವ ಪರಿಸ್ಥಿತಿ ಬಂದೊದಗಿದೆ!

ಹೌದು... ದೇಶೀಯತೆ, ಸ್ವಾವಲಂಬನೆ ಹಿನ್ನೆಲೆಯಲ್ಲಿ ಖಾದಿ ಬಗ್ಗೆ ಕನಸು ಕಂಡಿದ್ದು ಮಹಾತ್ಮಾ ಗಾಂಧಿಯವರು. ದೇಶಾದ್ಯಂತ ಖಾದಿ ಗ್ರಾಮೋದ್ಯೋಗಕ್ಕೆ, ಅದರಲ್ಲೂ ಮುಖ್ಯವಾಗಿ ಖಾದಿ ಬಟ್ಟೆಯಲ್ಲಿಯೇ ರಾಷ್ಟ್ರಧ್ವಜ ನಿರ್ಮಾಣವಾಗಬೇಕು ಎಂಬ ಧ್ವಜ ನೀತಿ ಜಾರಿಗೆ ಬಂತು. ಆದರೆ, ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ಹೊಸ ಧ್ವಜ ನೀತಿ ಹೊರಡಿಸಿದೆ.‌ ಇದು ಖಾದಿ, ರಾಷ್ಟ್ರಧ್ವಜ ತಯಾರಿಸುವವರ ಅಸ್ತಿತ್ವದ ಪ್ರಶ್ನೆ ಹುಟ್ಟುಹಾಕಿದೆ.

ಧಾರವಾಡದ ಗರಗ ಹಾಗೂ ಹೆಬ್ಬಳ್ಳಿ, ಬಾಗಲಕೋಟೆ ಜಿಲ್ಲೆಯಲ್ಲಿರುವ ತುಳಸಿಗೇರಿಯ ಖಾದಿ ಕೇಂದ್ರ, ಸೀಮಿಕೇರಿ, ಜಾಲಿಹಾಳಗಳಲ್ಲಿರುವ ಖಾದಿ ಕೇಂದ್ರಗಳಲ್ಲಿ ರಾಷ್ಟ್ರಧ್ವಜ ನೇಯುತ್ತಾರೆ. ಇವರು ನೇಯ್ದ ಬಟ್ಟೆಗೆ ಪವಿತ್ರ ರಾಷ್ಟ್ರಧ್ವಜದ ರೂಪ ನೀಡುತ್ತಿರುವುದು ಹುಬ್ಬಳ್ಳಿಯ ಬೆಂಗೇರಿ. ಕೇಂದ್ರ ಸರ್ಕಾರದ ಎಡವಟ್ಟಿಗೆ ಈಗ ಕರ್ನಾಟಕ ಖಾದಿ ಗ್ರಾಮೋದ್ಯೋಗದಲ್ಲಿ ಕಾಯಕ ನಿರತ 1500ಕ್ಕೂ ಹೆಚ್ಚು ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈಗ ಸತ್ಯಾಗ್ರಹದ ಹಾದಿ ತುಳಿಯಲಿದ್ದಾರೆ.

ರಾಷ್ಟ್ರಧ್ವಜಗಳನ್ನು ಯಂತ್ರಗಳಿಂದ ಹ್ಯಾಂಡ್‌‌ಸ್ಪನ್, ಕಾಟನ್ ಪಾಲಿಸ್ಟರ್, ಉಣ್ಣೆ, ಸಿಲ್ಕ್‌ನಿಂದ ಯಾರು ಬೇಕಾದರೂ ತಯಾರಿಸಬಹುದು ಎಂದು ಈಗ ಕೇಂದ್ರ ಸರ್ಕಾರ ಹೇಳಿದೆ. ಧ್ವಜವನ್ನು ಯಾವುದೇ ಬಟ್ಟೆಯಲ್ಲಾದರೂ ಸಿದ್ಧಗೊಳಿಸಬಹುದು ಎಂದು ಕಾನೂನನ್ನೇ ತಿದ್ದಿದೆ. ಈ ಮೂಲಕ ನಿಯಮವನ್ನೇ ಉಲ್ಲಂಘಿಸಿದೆ.

ಒಟ್ಟಿನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ "ಹರ್ ಘರ್ ತಿರಂಗಾ" ಹೊಸ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಆಯೋಜಿಸಿದೆ. ಇದಕ್ಕಾಗಿ ಪವಿತ್ರ ರಾಷ್ಟ್ರಧ್ವಜದ ಕಾನೂನನ್ನೇ ಬದಲಾಯಿಸಿದೆ! ಹೀಗೆ ತ್ರಿವರ್ಣದ ಅತ್ಯುನ್ನತ ಮೌಲ್ಯವನ್ನು ಕುಸಿಯುವಂತೆ ಮಾಡಿರುವುದು ಎಷ್ಟು ಸರಿ? ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/07/2022 11:30 am

Cinque Terre

58.38 K

Cinque Terre

6

ಸಂಬಂಧಿತ ಸುದ್ದಿ