ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಟ್ಟರೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ರಾಜ್ಯದಲ್ಲೇ ಎರಡನೇ ಮಹಾನಗರ ಪಾಲಿಕೆ. ಅದಕ್ಕೆ ಸರ್ಕಾರದಿಂದ ಬರೊಬ್ಬರಿ 300 ಕೋಟಿ ಬಾಕಿ ಹಣ ಬರಬೇಕಿದೆ. ಕಳೆದ ಮೂರು ವರ್ಷಗಳಿಂದ ಈ ಪಾಲಿಕೆಯಲ್ಲಿ ಜನಪ್ರತಿನಿಧಿಗಳೇ ಇರಲಿಲ್ಲ. ಈಗ ಅಲ್ಲಿ ಜನಪ್ರತಿನಿಧಿಗಳು ಬಂದ ಮೇಲೆ ಈ ಎಲ್ಲ ಮಾಹಿತಿ ಹೊರಬಿದ್ದಿದೆ. ಅಲ್ಲದೇ ಅವರು ಸರ್ಕಾರಕ್ಕೆ ಒತ್ತಡ ಕೂಡ ಹಾಕುತ್ತಿದ್ದಾರೆ.
ಹೌದು ರಾಜ್ಯ ಸರ್ಕಾರ 3 ರೀತಿಯ ಅನುದಾನವನ್ನು ಮಹಾನಗರ ಪಾಲಿಕೆಗೆ ನೀಡುವುದನ್ನು ಬಾಕಿ ಉಳಿಸಿಕೊಂಡಿದೆ. ಅವಳಿ ನಗರದಲ್ಲಿ 62 ಸಾವಿರ ಬೀದಿ ದೀಪಗಳಿದ್ದು, ಅದರ 64 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ಇನ್ನು ನೀರು ಸರಬರಾಜು ಮಾಡಲು ವಿದ್ಯುತ್ ಬೇಕು. ಆದರೆ ಸರ್ಕಾರ ಈ ವಿದ್ಯುತ್ ಬಿಲ್ 2019 ರ ನಂತರ ಕೊಟ್ಟೇ ಇಲ್ಲ. ಇನ್ನು ನಗರೋತ್ಥಾನ ಯೋಜನೆಗೆ 300 ಕೋಟಿ ಬರಬೇಕಿತ್ತು, ಆದ್ರೆ 265 ಕೋಟಿ ಮಾತ್ರ ಬಿಡುಗಡೆಯಾಗಿದೆ. ಹೀಗಾಗಿ ಇನ್ನು 35 ಕೋಟಿ ಬಾಕಿ ಉಳಿಸಿಕೊಂಡಂತಾಗಿದೆ. ಅಲ್ಲದೇ 2004 ರಿಂದ 2017 ರವರೆಗೆ ಪಾಲಿಕೆ ಪಿಂಚಣಿ ಹಣ 121 ಕೋಟಿ ಬರಬೇಕಿತ್ತು. ಅದೂ ಸಹ ಬಂದಿಲ್ಲ. ಆ 52 ಕೋಟಿ ಹಣ ಸರ್ಕಾರದಿಂದ ಬರಬೇಕಿದೆ. ಒಟ್ಟಾರೆ ಈ ಎಲ್ಲಾ ಯೋಜನೆಗಳಿಂದ 141 ಕೋಟಿ ಹಣ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ.
ಈ ಅನುದಾನ ಅಷ್ಟೇ ಅಲ್ಲದೇ ಇನ್ನು ಹಲವು ಅನುದಾನ ಬರಬೇಕಿದೆ. ಈ ಸಂಬಂಧ ಸರ್ಕಾರಕ್ಕೆ ಮೇಯರ್ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಈ ವಿಚಾರವಾಗಿ ಸಿಎಂ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೂ ಮನವಿ ಸಲ್ಲಿಸಿದ್ದಾರೆ. ಸದ್ಯ ಕೇಂದ್ರ ಸಚಿವ ಜೋಶಿ ನೇತೃತ್ವದಲ್ಲಿ ಒಂದು ಸಭೆ ಕೂಡಾ ಮಾಡಲು ಮನವಿ ಮಾಡಿದ್ದು, ಆ ಸಭೆಯಲ್ಲಿ ಸಿಎಂ ಕೂಡಾ ಇರಲಿದ್ದಾರೆ. ಆಗಲೇ ಈ ದೊಡ್ಡ ಮಟ್ಟದ ಅನುದಾನ ಬಿಡುಗಡೆಯಾಗಲಿದ್ದು, ನಂತರ ಈ ಅವಳಿ ನಗರದ ಅಭಿವೃದ್ಧಿಗೆ ಸಹಾಯವಾಗಲಿದೆ.
ಒಟ್ಟಾರೆ 3 ವರ್ಷಗಳ ನಂತರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಿರುವ ಜನಪ್ರತಿನಿಧಿಗಳು, ಇನ್ನಾದ್ರೂ ಜನರ ಪರವಾಗಿ ಕೆಲಸಕ್ಕೆ ಮುಂದಾಗಬೇಕು. ಸರ್ಕಾರ ಕೂಡ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಿ, ಪಾಲಿಕೆ ಸದಸ್ಯರು ತಮ್ಮ ವಾರ್ಡುಗಳಲ್ಲಿ ಅಭಿವೃದ್ಧಿ ಕೆಲಸ ಮಾಡುವಂತೆ ಮಾಡಬೇಕಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
23/06/2022 03:51 pm