ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಗೆ ಯಾವುದೇ ಮಹತ್ವದ ಯೋಜನೆ ಬಂದರೂ ಕೂಡ ಜನರು ಮಾತ್ರ ಆರಂಭದಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸುವುದು ಸಾಮಾನ್ಯವಾಗಿದೆ. ಈಗ ಮಹತ್ವದ ಯೋಜನೆಗಳಾಗಿರುವ ಸ್ಮಾರ್ಟ್ ಸಿಟಿ ಹಾಗೂ ಸಿ.ಆರ್.ಎಫ್ ಅನುದಾನದಲ್ಲಿ ಮಾಡುತ್ತಿರುವ ಕಾಮಗಾರಿ ವಿಳಂಬದಿಂದ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು... ಹುಬ್ಬಳ್ಳಿಯ ಕಾರವಾರ ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಜನರು ಎಷ್ಟು ದಿನಗಳು ಕಳೆದರೂ ಸಮಸ್ಯೆ ಅನುಭವಿಸುತ್ತಲೇ ಸಾಗುವಂತಾಗಿದೆ. ಇನ್ನೂ ಕೇಂದ್ರ ಸರ್ಕಾರದ ಸಿ.ಆರ್.ಎಫ್ ಅನುದಾನದಲ್ಲಿ ಹುಬ್ಬಳ್ಳಿ ಕಾಟನ್ ಮಾರ್ಕೆಟ್ ಹಾಗೂ ನೀಲಿಜನ್ ರಸ್ತೆಯ ಮೂಲಕ ಕಿಮ್ಸ್ ವರೆಗಿನ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದ್ದು, ಜನರು ಕಾಮಗಾರಿಯಿಂದ ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಮಳೆಯಾದರೇ ಕಾಮಗಾರಿ ಸ್ಥಗಿತಗೊಂಡು ಜನರು ಓಡಾಡುವುದೇ ದೊಡ್ಡ ಚಾಲೆಂಜ್ ಆಗಿ ಪರಿಣಮಿಸುತ್ತದೆ.
ಇನ್ನೂ ಕಾಮಗಾರಿ ವಿಳಂಬದಿಂದ ಸಾಕಷ್ಟು ವಾಣಿಜ್ಯ ಚಟುವಟಿಕೆಗಳಿಗೆ ಹೊಡೆತ ಬೀಳುತ್ತಿದ್ದು, ವಾಣಿಜ್ಯನಗರಿ ಖ್ಯಾತಿಯ ಹುಬ್ಬಳ್ಳಿಯಲ್ಲಿ ವಾಣಿಜ್ಯ ಕೇಂದ್ರ ನಿರ್ವಹಣೆ ದೊಡ್ಡ ಸವಾಲಾಗಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಒಂದು ಹಂತಕ್ಕೆ ಬಂದಿದೆ. ಆದರೆ ರಸ್ತೆ ನಿರ್ಮಾಣದಲ್ಲಿ ಮಾತ್ರ ಬಹುತೇಕ ತಡೆಯಾಗಿದ್ದು, ಇದರಿಂದ ಜನರು ಹೈರಾಣ ಆಗಿದ್ದಾರೆ.
ಒಟ್ಟಿನಲ್ಲಿ ಕುಂಟುತ್ತಾ ಸಾಗಿದ ಕಾಮಗಾರಿಗಳಿಂದ ಜನರು ಸಮಸ್ಯೆಗೆ ಗುರಿಯಾಗುತ್ತಿದ್ದು, ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಕ್ತ ಸೂಚನೆ ನೀಡಿ ಕಾಮಗಾರಿ ಅವಧಿಗೆ ಸರಿಯಾಗಿ ಪೂರ್ಣಗೊಳಿಸಲು ಸೂಚನೆ ನೀಡಬೇಕಿದೆ.
Kshetra Samachara
26/05/2022 09:10 am