ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳು ನಿಗದಿತ ಅವಧಿಯಲ್ಲಿಯೇ ದೊರೆಯುವಂತೆ ಮಾಡಲು ಶತಾಯು-ಗತಾಯ ಪ್ರಯತ್ನ ನಡೆಸಿದರೂ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಮಾತ್ರ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಲಯ ಕಚೇರಿಯಲ್ಲಿ ಖಾತೆ ಬದಲಾವಣೆ ಹಾಗೂ ಇನ್ನಿತರ ಕೆಲಸ ಕಾರ್ಯಕ್ಕೆ ಅಲೆದಾಡಿ ಚಪ್ಪಲಿ ಸವೆದರೂ ಕೂಡ ಕೆಲಸ ಮಾತ್ರ ಆಗುತ್ತಿಲ್ಲ. ಹುಬ್ಬಳ್ಳಿಯ ವಲಯ ಕಚೇರಿಯಲ್ಲಿ ಸುಮಾರು ನಾಲ್ಕು ತಿಂಗಳ ಕಳೆದರೂ ಖಾತೆ ಬದಲಾವಣೆ, ಟ್ಯಾಕ್ಸ್ ಸಂಬಂಧಿಸಿದ ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ ಹುಷಾರ್.. ನಿಮ್ಮ ಅರ್ಜಿಗಳು ಮಾತ್ರ ಡಸ್ಟ್ ಬಿನ್ ಸೇರುವುದು ಖಂಡಿತ. ವಲಯ ಕಚೇರಿಯಲ್ಲಿ ಎಲ್ಲ ರೀತಿಯಲ್ಲಿ ದಾಖಲೆ ಒದಗಿಸಿದರೂ ಕೂಡ ಅಧಿಕಾರಿಗಳು ತಮ್ಮ ಕೆಲಸವನ್ನು ತಾವು ಮಾಡಲು ಹಿಂದೇಟು ಹಾಕುತ್ತಿರುವುದರಿಂದ ಜನರು ಪಾಲಿಕೆ ಆಡಳಿತ ವ್ಯವಸ್ಥೆ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಇನ್ನೂ ಈ ಹಿಂದೇ ವಲಯ ಕಚೇರಿ-06ರಲ್ಲಿ ಕಳೆದ ಎರಡು ಮೂರು ತಿಂಗಳ ಹಿಂದಷ್ಟೇ ಅರ್ಜಿ ಕೊಟ್ಟಿದ್ದರೂ ಕೂಡ ಅಧಿಕಾರಿಗಳು ಮಾತ್ರ ಹರಕೆ ಉತ್ತರವನ್ನು ನೀಡುತ್ತಿರುವುದು ನಿಜಕ್ಕೂ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಇನ್ನಾದರೂ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿಯೇ ಸರ್ಕಾರದ ಸೇವೆಗಳು ದೊರೆಯುವಂತೆ ಮಾಡಬೇಕಿದೆ.
Kshetra Samachara
10/05/2022 06:03 pm