ವರದಿ-ಮಲ್ಲೇಶ ಸೂರಣಗಿ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನೃಪತುಂಗ ಬೆಟ್ಟ ಅಂದರೆ ನಿಜಕ್ಕೂ ಇಲ್ಲಿನ ಜನರಿಗೆ ಮಾತ್ರವಲ್ಲದೆ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ಪ್ರವಾಸಿಗರಿಗೆ ಸ್ವರ್ಗವೇ ಧರೆಗೆ ಇಳಿದಂತೆ. ಆದರೆ ಹುಬ್ಬಳ್ಳಿಯ ನೃಪತುಂಗನಗರದ ವ್ಯವಸ್ಥೆ ನೋಡಿದರೇ ನರಕವೇ ನೆಲೆಸಿದಂತೆ.
ಹೌದು..ವಾಣಿಜ್ಯನಗರಿ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಹಿಂಭಾಗದಲ್ಲಿರುವ ಉಣಕಲ್ ಗೆ ಹೊಂದಿಕೊಂಡಿರುವ ನೃಪತುಂಗ ನಗರದ ವ್ಯವಸ್ಥೆ ನೋಡಿದರೆ ನಿಜಕ್ಕೂ ಎಂತವರಿಗೂ ಕೂಡ ಬೇಸರ ಮೂಡುವುದು ಖಂಡಿತ.
ಎಲ್ಲೆಂದರಲ್ಲಿ ಕೆಸರು ತುಂಬಿದ ಗುಂಡಿಗಳು, ನಡೆದುಕೊಂಡು ಹೋಗಲು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿದ್ದು, ಮಳೆ ಬಂದರೆ ನೃಪತುಂಗನಗರದ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದ್ದು, ಈ ಬಗ್ಗೆ ಮನವಿ ನೀಡಿದರು ಯಾವುದೇ ಕ್ರಮವನ್ನು ಪಾಲಿಕೆಯವರಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಕೈಗೊಂಡಿಲ್ಲ. ಇದರಿಂದ ಜನರು ಹಿಡಿಶಾಪ ಹಾಕುವಂತಾಗಿದೆ.
ಇನ್ನೂ ಬೇಸಿಗೆ ಕಾಲದಲ್ಲಿ ಆಗೊಮ್ಮೆ ಈಗೊಮ್ಮೆ ಬರುವ ಮಳೆಯಿಂದ ಜನರು ಕಂಗಾಲಾಗಿದ್ದಾರೆ. ಮಳೆಗಾಲದಲ್ಲಿ ಸುರಿಯುವ ಮಳೆಯನ್ನ ನೆನೆಸಿಕೊಂಡು ಮತ್ತಷ್ಟು ಗಾಬರಿಗೊಂಡಿದ್ದಾರೆ. ಈ ರಸ್ತೆಯಲ್ಲಿ ಸುಮಾರು ಜನರು ಬಿದ್ದು ಗಾಯಗೊಂಡಿದ್ದರೂ ಕೂಡ ಸ್ಥಳೀಯ ಪಾಲಿಕೆಗೆ ಹಾಗೂ ಜನಪ್ರತಿನಿಧಿಗಳಿಗೆ ಮಾತ್ರ ಈ ರಸ್ತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಬಾರದೇ ಇರುವುದು ವಿಪರ್ಯಾಸಕರ ಸಂಗತಿ.
ಒಟ್ಟಿನಲ್ಲಿ ನೃಪತುಂಗನಗರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆ ಇದ್ದೆ ಇದೆ. ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಶಾಸಕರು ಸೂಕ್ತ ಅನುದಾನ ಬಿಡುಗಡೆ ಮಾಡಿ ಸಾರ್ವಜನಿಕ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಬೇಕಿದೆ.
Kshetra Samachara
11/04/2022 05:55 pm