ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಲೇ ಇದೆ. ನಿವೇಶನ ಇಲ್ಲದವರು ಒಂದು ಕಡೆಯಾದರೇ. ನಿವೇಶನ ಇದ್ದು ಇಲ್ಲದಂತಾಗಿರುವವರು ಮತ್ತೊಂದು ಕಡೆ. ಈ ಎಲ್ಲ ಅವ್ಯವಸ್ಥೆ ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದ್ದು, ಪಾಲಿಕೆ ಹಾಗೂ ಜನ ಪ್ರತಿನಿಧಿಗಳ ನಿರ್ಧಾರವನ್ನು ಜನರು ಕಾದು ಕುಳಿತುಕೊಳ್ಳುವಂತಾಗಿದೆ.
ಹೌದು ಜಗದೀಶನಗರದ ಜನರ ಕಷ್ಟದ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಬೆನ್ನಲ್ಲೆ, ಈಗ ಮತ್ತೊಂದು ಸಮಸ್ಯೆ ಮುನ್ನೆಲೆಗೆ ಬಂದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂರಾರು ಕುಟುಂಬಗಳು ನಿವೇಶನವಿಲ್ಲದೇ ಪರದಾಡುವಂತಾಗಿದೆ. ಈಗಾಗಲೇ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಸಾಕಷ್ಟು ಮನವಿ ಮಾಡಿದರು, ಯಾವುದೇ ಪ್ರಯೋಜನವಾಗಿಲ್ಲ. ಆದರೆ ಪಾಲಿಕೆ ಆಯುಕ್ತರು ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ಸ್ವಂತ ಮನೆಯ ಕನಸು ಕಟ್ಟಿಕೊಂಡು ಜೀವನ ನಡೆಸುತ್ತಿರುವವರಿಗೆ ಸುಮಾರು ವರ್ಷ ಕಳೆದರೂ ಮನೆಯ ಭಾಗ್ಯ ದೊರೆತಿಲ್ಲ. ಅಲ್ಲದೇ ಬೀದಿಯಲ್ಲಿ, ಬಾಡಿಗೆ ಮನೆಯಲ್ಲಿ ವಯಸ್ಸು ಕಳೆಯುವಂತಾಗಿದ್ದು, ಜನರು ಆಶ್ರಯ ಮನೆಯ ದಾರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಜೀವನ ಮುಗಿಯುವದರೊಳಗೆ ಒಂದು ಸೂರು ಒದಗಿಸಿಕೊಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಪಾಲಿಕೆ ನೊಂದವರ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಒಟ್ಟಿನಲ್ಲಿ ನೊಂದವರ ಬದುಕಿಗೆ ಆಶಾಕಿರಣವಾಗಬೇಕಿದ್ದ ಪಾಲಿಕೆ ಮೌನ ತಾಳಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಕೂಡಲೇ ಪಾಲಿಕೆ ಎಚ್ಚೆತ್ತುಕೊಂಡು ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/04/2022 04:48 pm