ಪಬ್ಲಿಕ್ ನೆಕ್ಸ್ಟ್ ವಿಶೇಷ -ಈರಣ್ಣ ವಾಲಿಕಾರ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರ. ಈ ದೃಷ್ಟಿಯಿಂದ ಹುಬ್ಬಳ್ಳಿಯನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆ ಮಾಡಲು ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಆದರೆ ಇದುವೇ ಹುಬ್ಬಳ್ಳಿ ಮಂದಿಗೆ ಮಾರಕವಾಗಿ ಪರಿಣಮಿಸಿದೆ. ಅಭಿವೃದ್ಧಿಯಲ್ಲಿ ಹೆಸರು ಮಾಡಬೇಕಿದ್ದ ಹುಬ್ಬಳ್ಳಿ ಈಗ ಪರಿಸರಮಾಲಿನ್ಯದ ಅಪಕೀರ್ತಿ ಹಣೆ ಪಟ್ಟಿಕಟ್ಟಿಕೊಂಡಿದೆ.
ಹೌದು, ಸ್ವಿಜರ್ಲ್ಯಾಂಡ್ ಮೂಲದ ಐಕ್ಯೂ ಏರ್ ಸಂಸ್ಥೆ ವಿಶ್ವದ ವಿವಿಧ ದೇಶಗಳ ಮತ್ತು ಪ್ರಮುಖ ನಗರಗಳ ವಾಯುಗುಣಮಟ್ಟದ ವರದಿ ತಯಾರಿಸಿದೆ. ಈ ವರದಿಯಲ್ಲಿ ರಾಜ್ಯದ 14 ನಗರಗಳು ವಾಯುಮಾಲಿನ್ಯದಿಂದ ಬಳಲುತ್ತಿರುವ ಅಂಶ ಬಹಿರಂಗಗೊಂಡಿದೆ. ವಿಪರ್ಯಾಸವೆಂದರೆ ರಾಜಧಾನಿ ಬೆಂಗಳೂರನ್ನು ಹಿಂದೆಯಿಟ್ಟು ಹುಬ್ಬಳ್ಳಿ ಪ್ರಥಮ ಸ್ಥಾನವನ್ನು ಪಡೆದಿದೆ. ಇನ್ನು ಗಡಿ ಜಿಲ್ಲೆಯ ಯಾದಗಿರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಇನ್ನು ಐಕ್ಯೂ ಏರ್ ಸಂಸ್ಥೆ ವರದಿಯನ್ನು ಸ್ವತಃ ಜಿಲ್ಲಾಡಳಿತವೇ ಒಪ್ಪಿಕೊಂಡಿದೆ. ಸದ್ಯ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ, ಇದರಿಂದಾಗಿ ಅತೀ ಹೆಚ್ಚು ವಾಯು ಮಾಲಿನ್ಯವಾಗುತ್ತಿದೆ ಎನ್ನುವ ಸಮರ್ಥನೆಯನ್ನು ಜಿಲ್ಲಾಡಳಿತ ನೀಡುತ್ತಿದೆ.
ಒಟ್ಟಿನಲ್ಲಿ ಹರ್ಷದ ಕೂಳಿಗಾಗಿ ವರ್ಷದ ಕೂಳು ಕಳೆದುಕೊಂಡತ್ತಾಗಿದೆ ಹುಬ್ಬಳ್ಳಿ ಜನರ ಪರಿಸ್ಥಿತಿ. ಮಂದಗತಿಯ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ಇಷ್ಟು ದಿನ ಅಭಿವೃದ್ಧಿ ವಿಚಾರದಲ್ಲಿ ಹೆಸರಾಗುತ್ತಿದ್ದ ಹುಬ್ಬಳ್ಳಿ ಈಗ ಕಲುಷಿತ ಗಾಳಿ ಹೊಂದಿರುವ ನಗರ ಅಂತ ಅಪಕೀರ್ತಿಗೆ ಭಾಜನವಾಗಿರುವುದು ವಿಪರ್ಯಾಸದ ಸಂಗತಿ. ಆದಷ್ಟು ಬೇಗ ಸ್ಮಾರ್ಟ್ ಸಿಟಿ ಕಾಮಗಾರಿ ಮುಗಿಸಿ ಮಾಲಿನ್ಯ ಮುಕ್ತ ಜಿಲ್ಲೆಯನ್ನಾಗಿಸಿ ಆರೋಗ್ಯ ಯುಕ್ತ ವಾತಾವಾರಣ ಕಲ್ಪಿಸಿಕೊಡಬೇಕಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/04/2022 01:19 pm