ಹುಬ್ಬಳ್ಳಿ: ಅದು ಪ್ರತಿನಿತ್ಯ ಒಂದೂವರೆ ಲಕ್ಷ ವಾಹನಗಳು ಸಂಚರಿಸುವ, ಲಕ್ಷಾಂತರ ಪಾದಚಾರಿಗಳು ಬಳಸುವ ಸದಾ ಗಿಜಿಗಿಡುವ ವೃತ್ತ. ಕೆಲವು ದಿನಗಳ ಮಟ್ಟಿಗೆ ಈ ವೃತ್ತ ಬಂದ್ ಆಗುವ ಸಂಭವ ಇದೆ. ಅಷ್ಟಕ್ಕೂ ಸರಕಾರದ ಇಂತಹ ದೊಡ್ಡ ನಿರ್ಧಾರದ ಹಿಂದೆ ಇರುವ ಕಾರಣ ಏನು ಗೊತ್ತಾ? ಈ ಸ್ಟೋರಿ ನೋಡಿ.
ಹೌದು..ಹುಬ್ಬಳ್ಳಿಯಲ್ಲಿರುವ ಐಕಾನಿಕ್ ಸರ್ಕಲ್. ವಾಣಿಜ್ಯನಗರಿಯ ಐಡೆಂಟಿಟಿ ಕೂಡ ಇದೇ. ಚೆನ್ನಮ್ಮ ಸರ್ಕಲ್ ಕಾಣಿಸಿತು ಅಂದರೆ, ಹುಬ್ಬಳ್ಳಿ ಬಂತು ಅಂತಾ ಪಕ್ಕಾ ಆಗುತ್ತದೆ. ಯಾವುದೇ ಪಕ್ಷ, ಅಥವಾ ಸಂಘಟನೆ ಏನೇ ಪ್ರತಿಭಟನೆ ನಡೆಸಿದರೂ, ಅದಕ್ಕೆ ಈ ಚೆನ್ನಮ್ಮ ವೃತ್ತವೇ ಮೂಕ ಸಾಕ್ಷಿ. ಹುಬ್ಬಳ್ಳಿಯ ದೊಡ್ಡ ಜಂಕ್ಷನ್ ಪಾಯಿಂಟ್ ಇನ್ನೇನು ಕೆಲವೇ ದಿನಗಳಲ್ಲಿ ಸಂಪೂರ್ಣ ಬಂದ್ ಆಗಲಿದೆ. ಕಿತ್ತೂರು ಚನ್ನಮ್ಮ ಸರ್ಕಲ್‌ಅನ್ನು ಪೂರ್ಣ ಬಂದ್ ಮಾಡಿ, ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಯೋಜನೆಯ ಕಾಮಗಾರಿಗೆ ಚಾಲನೆ ಸಿಗಲಿದೆ.
ಇದೇ ವೃತ್ತದ ಮೇಲೆ ಅವಲಂಬಿತ ಇರುವ ಹೋಟೆಲ್ ಮತ್ತು ಇನ್ನಿತರ ವ್ಯಾಪಾರಿಗಳ ಬದುಕು ಮತ್ತೊಮ್ಮೆ ಬೀದಿಗೆ ಬರಲಿದೆ. ಕೊರೊನಾ ಕಾಟದಿಂದ ಕಂಗೆಟ್ಟು ಇದೀಗ ನಿಟ್ಟುಸಿರು ಬಿಡುವ ಸಂದರ್ಭದಲ್ಲಿಯೇ ಮತ್ತೆ ವ್ಯಾಪಾರಿಗಳ ಪಾಲಿಗೆ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಲಿದೆ. ಪ್ಲೈಓವರ್ ಕೆಲಸ ಶುರುಮಾಡಿದರೆ, ತಾವು ಮಕಾಡೆ ಮಲಗಿದಂತೆ ಎಂಬುದು ಸರ್ಕಲ್ ಬಳಿಯಿರುವ ಹತ್ತು ಹಲವು ಬಗೆಯ ಅಂಗಡಿಕಾರರು ಮತ್ತು ಹೋಟೆಲ್‌ನವರ ಚಿಂತೆಯಾಗಿದೆ.
ರಾಜ್ಯದ ಏಳು ಪ್ರಮುಖ ರಸ್ತೆಗಳು ಹಾದು ಹೋಗುವ ಸರ್ಕಲ್ ಬಂದ್ ಆದಲ್ಲಿ ಅವಳಿನಗರ ಕೆಲ ದಿನಗಳ ಮಟ್ಟಿಗೆ ಅತೀ ಅಸಹನೀಯ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಸಂಚಾರ ಹಾಗೂ ಬದುಕು ಎರಡೂ ದೃಷ್ಟಿಯಿಂದ ಹಳೇ ಬಸ್ ನಿಲ್ದಾಣ ಸ್ಥಳಾಂತರ, ಕೋವಿಡ್ ಮೊದಲಾದ ಕಾರಣಗಳಿಗೆ ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಇನ್ನು ಕಾಮಗಾರಿಯ ದೃಷ್ಟಿಯಿಂದ ಪೂರ್ಣ ಬಂದ್ ಮಾಡಿದಲ್ಲಿ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಅನ್ನೋದು ಅನೇಕ ಸಣ್ಣ ವ್ಯಾಪಾರಸ್ಥರ ಆತಂಕವಾಗಿದೆ. ಆದರೆ ಇಂತಹ ಬೃಹತ್ ಯೋಜನೆ ಕಾಮಗಾರಿ ನಿರ್ಮಾಣವಾಗಬೇಕಾದ್ರೆ ವೃತ್ತ ಸಂಪೂರ್ಣ ಬಂದ್ ಮಾಡೋದು ಅನಿವಾರ್ಯವಾಗಲಿದೆ.
ಆಳವಾದ ಗುಂಡಿಗಳನ್ನು ತೋಡಿ ಪ್ಲೈ ಓವರ್‌ಗೆ ಪಿಲ್ಲರ್ ಅಳವಡಿಕೆ ಕೆಲಸ ನಡೆಯಬೇಕಿದೆ. ಈಗಾಗಲೇ ಗೋಕುಲ ರಸ್ತೆ ಹಾಗೂ ಐಟಿ ಪಾರ್ಕ್ ಮುಂಭಾಗ ಪಿಲ್ಲರ್ ಕೆಲಸ ಮುಕ್ಕಾಲು ಭಾಗ ಶುರುವಾಗುತ್ತಿದ್ದಂತೆ ಸಂಚಾರವನ್ನು ಪರ್ಯಾಯ ಮಾರ್ಗದಲ್ಲಿ ತಿರುಗಿಸಲಾಗಿದೆ. ಕಿತ್ತೂರು ಚನ್ನಮ್ಮ ಸರ್ಕಲ್‌ಅನ್ನು ಕೆಲ ದಿನಗಳ ಮಟ್ಟಿಗೆ ಸಂಪೂರ್ಣ ಬಂದ್ ಮಾಡಿದಲ್ಲಿ ಪರ್ಯಾಯ ಮಾರ್ಗಗಳ ಮೇಲೆ ಇನ್ನಿಲ್ಲದ ಹೊರೆ ಬೀಳೋದಂತೂ ಗ್ಯಾರಂಟಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/03/2022 09:48 am