ಹುಬ್ಬಳ್ಳಿ: ಹುಬ್ಬಳ್ಳಿ ಚನ್ನಮ್ಮ ವೃತ್ತದ ಫ್ಲೈ ಓವರ್ ನಿರ್ಮಾಣದ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಕಂಡು ಬಂದ ಹಿನ್ನಲೆಯಲ್ಲಿ, ಯೋಜನೆಯಲ್ಲಿ ಅಗತ್ಯ ಬದಲಾವಣೆ ತರುವ ನಿಟ್ಟಿನಲ್ಲಿ ರಚಿಸಲಾದ ತಜ್ಞರ ಸಮಿತಿ ತನ್ನ ವರದಿಯನ್ನು ಸಿದ್ದಪಡಿಸಿದೆ. ಸಮಿತಿ ಪ್ಲೈ ಓವರ್ ನಿರ್ಮಾಣದ ಅಗತ್ಯತೆ ಒಪ್ಪಿಕೊಂಡಿದ್ದು, ಯೋಜನೆಯಲ್ಲಿ ಹಲವು ಮಹತ್ವದ ಮಾರ್ಪಾಡುಗಳಿಗೆ ಶಿಫಾರಸ್ಸು ಮಾಡಿದೆ.
ಈ ಕುರಿತು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಹಾಗೂ ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜು ಉಪ ಕುಲಪತಿ ಅಶೋಕ ಶೆಟ್ಟರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚೆನ್ನಮ್ಮ ವೃತ್ತದಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡುವ ನಿಟ್ಟಿಲ್ಲಿ ಹಾಗೂ ಭವಿಷ್ಯದ ದೃಷ್ಟಿಯಿಂದ ಪ್ಲೈ ಓವರ್ ನಿರ್ಮಾಣ ಅತ್ಯಗತ್ಯವಾಗಿದೆ. ಚೆನ್ನಮ್ಮ ವೃತ್ತಕ್ಕೆ ಸಮಾನಂತರಾಗಿರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಹೆಚ್ಚು ಭೂ ಸ್ವಾಧೀನ ಮಾಡಬೇಕಾಗುತ್ತದೆ ಇದಕ್ಕೆ ಹಣ ವೆಚ್ಚವಾಗುತ್ತದೆ. ಜೊತೆಗೆ ಜನರು ಹಾಗೂ ಮಾರುಕಟ್ಟೆ ಪ್ರದೇಶಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಇದು ಕಾರ್ಯಸಾಧುವಲ್ಲದ ಯೋಜನೆಯಾಗಿದೆ.
ಹುಬ್ಬಳ್ಳಿ ನಗರದಲ್ಲಿ ವಾರ್ಷಿಕವಾಗಿ ಶೇ.7 ರಷ್ಟು ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ವಾಹನ ದಟ್ಟಣೆ ಹಾಗೂ ರಸ್ತೆ ಕ್ಷಮತೆ ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚನ್ನಮ್ಮ ವೃತ್ತದ ಫ್ಲೈ ಓವರ್ ಯೋಜನೆಯನ್ನು ರೂಪಿಸಿದೆ. ಸದ್ಯ 16 ಸಾವಿರ ದಷ್ಟಿರುವ ವಾಹನ ದಟ್ಟಣೆ ವಾರ್ಷಿಕ ಶೇ.3.5 ಬೆಳವಣಿಗೆ ದರದಲ್ಲಿ ವೃದ್ಧಿಸಿದರೆ, ಚನ್ನಮ್ಮ ವೃತ್ತದಲ್ಲಿನ ವಾಹನ ದಟ್ಟಣೆ 2027 ಕ್ಕೆ ,18 ಸಾವಿರ 2037 ಕ್ಕೆ 24 ಸಾವಿರಕ್ಕೂ ಹೆಚ್ಚಾಗಬಹುದು. ಭವಿಷ್ಯದಲ್ಲಿ ಸಂಚಾರಿ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಪ್ಲೈ ಓವರ್ ನಿರ್ಮಾಣ ಅಗತ್ಯವಾಗಿದೆ. ಚನ್ನಮ್ಮ ವೃತ್ತ ಸಂಪರ್ಕಿಸುವ 7 ರಸ್ತೆಗಳ ಕ್ಷಮತೆ, ಅತ್ಯಧಿಕ ಸಂಚಾರ ದಟ್ಟಣೆ ಸಮಯದಲ್ಲಿನ ತೀರ ಅಸಮರ್ಥವಾಗಿದೆ. ಸಾರ್ವಜನಿಕರ ಆಕ್ಷೇಪಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸಮಿತಿ ಹಲವು ಮಹತ್ವದ ಮಾರ್ಪಾಡುಗಳನ್ನು ಫ್ಲೈ ಓವರ್ ಯೋಜನೆಯಲ್ಲಿ ತರಲು ಶಿಫಾರಸ್ಸು ಮಾಡಿದೆ.
ಫ್ಲೈ ಓವರ್ ನಿರ್ಮಾಣದಲ್ಲಿ ಐ.ಆರ್.ಸಿ(ಇಂಡಿಯನ್ ರೋಡ್ಸ್ ಕಾಂಗ್ರೇಸ್) ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ವಾಹನಗಳು, ಪಾದಚಾರಿಗಳ ನಡುವಿನ ಸಂಚಾರ ಸಂಘರ್ಷ ಕಡಿಮೆಯಾಗಬೇಕು. ಅಡೆತಡೆಗಳು ಇಲ್ಲದ ಸುಗಮ ಸಂಚಾರ ಸಾಧ್ಯವಾಗಬೇಕು. ರಸ್ತೆ ಸುರಕ್ಷಿತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
ಹೊಸೂರು, ಹಳೇ ಬಸ್ ನಿಲ್ದಾಣ ಹಾಗೂ ಪಾಲಿಕೆ ಎದುರಿನ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ. ಹೊಸೂರು ಬಸ್ ನಿಲ್ದಾಣವನ್ನು ಐ.ಟಿ. ಪಾರ್ಕ್ ಎದುರು, ಹಳೇ ಬಸ್ ನಿಲ್ದಾಣದ ಎದುರಿನ ನಿಲ್ದಾಣವನ್ನು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಸಂಚರಿಸುವವರಿಗೆ ಅನುಕೂಲವಾಗುವಂತೆ ನೂತನ ಬಸ್ ನಿಲ್ದಾಣದಲ್ಲಿ, ಧಾರವಾಡದಿಂದ ಹುಬ್ಬಳ್ಳಿಗೆ ಆಗಮಿಸಿದವರಿಗೆ ಅನುಕೂಲವಾಗುವಂತೆ ಬಸವ ವನದ ಹತ್ತಿರ ಸ್ಥಳಾಂತರಿಸಲು ಸೂಚಿಸಲಾಗಿದೆ. ಪಾಲಿಕೆ ಎದುರಿನ ಬಸ್ ನಿಲ್ದಾಣವನ್ನು ಮುಂದೆ 300 ಮೀಟರ್ ದೂರದಲ್ಲಿ ನಿರ್ಮಿಸಬಹುದು. ಇದರಿಂದ ಯೋಜನೆಗೆ ಅನುಕೂಲವಾಗಿದ್ದು, ಮೇಲು ಸೇತುವೆ ರಸ್ತೆ ಹಾಗೂ ಸೇವಾ ರಸ್ತೆಗಳು 7.5 ಮೀಟರ್ ವರೆಗೆ ವಿಸ್ತರಿಸಲಿವೆ. ಪಾದಚಾರಿಗಳ ಅನುಕೂಲವಾಗುವಂತೆ ಫೂಟ್ ಬಾತ್ ಸಹ ನಿರ್ಮಿಸಬಹುದಾಗಿದೆ ಎಂದರು.
Kshetra Samachara
20/11/2021 09:26 pm