ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಈಗ ಪಾರ್ಕಿಂಗ್ ಹೆಸರಲ್ಲಿ ಬಡವರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ಇನ್ನುಮುಂದೆ ನಿಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕ್ ಮಾಡಬೇಕು ಅಂದರೆ ಪಾರ್ಕಿಂಗ್ ಹಣವನ್ನು ಪಾವತಿ ಮಾಡಲೇ ಬೇಕು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಅವಳಿನಗರದ ಜನರಿಗೆ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಅವಳಿ ನಗರದ ಜನರು ಕೆಂಡಾಮಂಡಲರಾಗಿದ್ದಾರೆ. ರಸ್ತೆಗಳು ಸರಿ ಇಲ್ಲದಿದ್ದರೂ ಪಾರ್ಕಿಂಗ್ ಹೆಸರಿನಲ್ಲಿ ವಸೂಲಿ ಮಾಡಲು ಮುಂದಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಮಹಾನಗರ ಪಾಲಿಕೆಯ ಅಭಿವೃದ್ಧಿ ಈಗಾಗಲೇ ಮರೀಚಿಕೆಯಾಗಿದೆ. ಆದರೆ ಕರದಾತರ ನಿರಂತರ ಸುಲಿಗೆ ಮುಂದುವರೆದಿದ್ದು, ಆಂಗ್ಲರ ಮಾದರಿಯಲ್ಲಿ ಪಾಲಿಕೆಯ ಕಂದಾಯ ವಿಭಾಗ ಅವಳಿನಗರ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಜನರು ಪಾಲಿಕೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ಅವಳಿನಗರ ಕಳೆದ ಎರಡು ವರ್ಷಗಳಿಂದ ಕೋವಿಡ್-19 ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದೆ. ಈ ಮಧ್ಯ ಅವಳಿನಗರದಲ್ಲಿ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಅನುದಾನ SFC, SCP/TSP, ಸ್ಮಾರ್ಟ್ ಸಿಟಿ ಕಾಮಗಾರಿಗಳ ಹೊರತು ಮತ್ತಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಇಂತಹ ಸಂಕಷ್ಟದಲ್ಲೂ ಸಹ ರಾಜ್ಯದಲ್ಲಿಯೇ ಹೆಚ್ಚಿನ ಕರ ಆಕರಿಸುವ ಪ್ರಮುಖ ಪಾಲಿಕೆಯಾಗಿ ಹು-ಧಾ ಮಹಾನಗರ ಪಾಲಿಕೆ ಗುರುತಿಸಿಕೊಂಡಿದೆ. ತಾನು ಆಕರಿಸುವ “ಕರ' (Tax) ತಕ್ಕಂತಹ ಯಾವುದೇ ಮೂಲಭೂತ ಸೌಲಭ್ಯಗಳನ್ನು ತನ್ನ ಕರದಾತರಿಗೆ ನೀಡುವಲ್ಲಿ ವಿಫಲವಾಗಿದೆ. ಹೀಗಿರುವಾಗ ಪಾರ್ಕಿಂಗ್ ಕಾರ್ಯ ಪ್ರಗತಿಯಲ್ಲಿದೆ ಅಂತಾರೆ ಕಮೀಷನರ್.
ಒಟ್ಟಿನಲ್ಲಿ ಅನೇಕ ಸಂಶಯಗಳಿಗೆ ಕಾರಣವಾಗುವ ಮೂಲಕ ಸಾರ್ವಜನಿಕ ವಿರೋಧಿ ಮತ್ತು ವಾಣಿಜ್ಯ ವಿರೋಧಿ ಹಗಲು ದರೋಡೆಗೆ ಇಳಿಯಲು ಪಾಲಿಕೆ ಮುಂದಾಗಿದ್ದು, ಪಾರ್ಕಿಂಗ್ ಫೀ ಆಕರಣೆಗೆ ಟೆಂಡರ್ ಕರೆದಿದ್ದು, ತಕ್ಷಣ ಅವಳಿ ಮಹಾನಗರದ ಜನತೆಯ ಹಿತದೃಷ್ಟಿಯಿಂದ ವಾಣಿಜ್ಯೋದ್ಯಮದ ಹಿತದೃಷ್ಟಿಯಿಂದ ಪಾರ್ಕಿಂಗ್ ಫೀ' ಆಕರಣೆಯ ಗುತ್ತಿಗೆಯ ಟೆಂಡರ್ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಜನರು ಆಗ್ರಹಿಸಿದ್ದಾರೆ.
Kshetra Samachara
08/10/2021 01:16 pm