ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರಿಗೆ ತ್ವರಿತ ಬಸ್ ಸಂಚಾರ ಒದಗಿಸುವ ನಿಟ್ಟಿನಲ್ಲಿ, ಬಿಆರ್‌ಟಿಎಸ್ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆದರೆ, ಈ ಯೋಜನೆಯಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿತ್ತು. ಕಾಮಗಾರಿ ವಿಳಂಬ, ಅವೈಜ್ಞಾನಿಕ ಯೋಜನೆಯಿಂದ ಜನರು ರೋಸಿ ಹೋಗಿದ್ದಾರೆ.
ಇದೆಲ್ಲದರ ನಡುವೆ ಕಾಮಗಾರಿ ಪೂರ್ತಿ ಆಗದೇ ಇದ್ದರೂ ಅವಳಿ ನಗರದ ನಡುವೆ ಬಿಆರ್‌ಟಿಎಸ್ ಚಿಗರಿ ಬಸ್ ಸಂಚಾರ ಆರಂಭವಾಗಿದೆ. ಈ ಯೋಜನೆಯ ಬಸ್ ಗಳ ನಿರ್ವಹಣೆಯನ್ನು ವಾಯುವ್ಯ ಸಾರಿಗೆ ಸಂಸ್ಥೆಯೇ ಮಾಡುತ್ತಿದ್ದು, ಸಾರಿಗೆ ಸಂಸ್ಥೆಗೆ ನೀಡಬೇಕಾದ ಅನುದಾನವನ್ನು ಸರ್ಕಾರ ನೀಡದೇ ನಿರ್ಲಕ್ಷ್ಯ ತೋರುತ್ತಿದೆ.
2018 ರಲ್ಲಿ ನಡೆದ ಸರ್ಕಾರದ ಸಚಿವ ಸಂಪುಟದ ನಿರ್ಧಾರದಂತೆ ವಾಯುವ್ಯ ಸಾರಿಗೆ ಸಂಸ್ಥೆಗೆ 35 ಕೋಟಿ ರೂಪಾಯಿ ಅನುದಾನ ನೀಡಬೇಕಿತ್ತು. ಆದರೆ, ಸರ್ಕಾರ ಬದಲಾವಣೆ ಬಳಿಕ ಹಂತ ಹಂತವಾಗಿ ಹಣ ಬಿಡುಗಡೆ ನಿರ್ಧಾರ ಮಾಡಿದ್ದ ಸರ್ಕಾರ, ತಾಂತ್ರಿಕ ಕಾರಣದಿಂದಾಗಿ ಮೊದಲನೇ ಹಂತದ ಹಣ ಬಿಡುಗಡೆ ಮಾಡಿರಲಿಲ್ಲ.
ಇದೀಗ ಎರಡನೇ ಹಂತದ ಅನುದಾನವನ್ನೇನೋ ಸರ್ಕಾರ ಮಾಡಿದೆ. ಅದು ಸಾರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ. ಹತ್ತು ಕೋಟಿ ಅನುದಾನ ಬಿಡುಗಡೆ ಮಾಡಿರುವ ಸರ್ಕಾರ ಅದರಲ್ಲೂ ಬಿಆರ್‌ಟಿಎಸ್ ಗೆ ಆರು ಕೋಟಿ, ವಾಯುವ್ಯ ಸಾರಿಗೆ ಸಂಸ್ಥೆಗೆ ಕೇವಲ ನಾಲ್ಕು ಕೋಟಿ ಬಿಡುಗಡೆ ಮಾಡಿದೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾವಿರಾರು ಕೋಟಿ ಅನುದಾನದಲ್ಲಿ ಬಿಆರ್‌ಟಿಎಸ್ ಯೋಜನೆ ನಿರ್ಮಾಣ ಆಗಿದೆ. ಈಗಾಗಲೇ ಬಸ್ ಸಂಚಾರ ಕೂಡ ಆರಂಭವಾಗಿ ವರ್ಷವೇ ಕಳೆದಿದೆ. ಅದರಲ್ಲೂ ಆರ್ಥಿಕವಾಗಿ ಸಧೃಡವಾಗಿರುವ ಬಿಆರ್‌ಟಿಎಸ್, ವಿವಿಧ ಯೋಜನೆಗಳ ಜಾರಿಗಾಗಿ 137 ಕೋಟಿ ರೂಪಾಯಿ ಎಫ್‌ಡಿ ಮಾಡಿದೆ.
ಎಫ್‌ಡಿ ಇಟ್ಟಿರುವ ಹಣ ಬಡ್ಡಿಯಿಂದ ಬಿಆರ್‌ಟಿಎಸ್ ಕಾರಿಡಾರ್, ಬಸ್ ನಿಲ್ದಾಣದ ಖರ್ಚುಗಳನ್ನು ನಿರ್ವಹಣೆ ಮಾಡುವ ಉದ್ದೇಶ ಹೊಂದಿದೆ. ಇತ್ತ ಆರ್ಥಿಕವಾಗಿ ಮುಗ್ಗರಿಸಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನ ನೌಕರರಿಗೆ ವೇತನ ಕೊಡಲಾಗದೇ ತೊಳಲಾಡುತ್ತಿದೆ.
ನಿವೃತ್ತ ನೌಕರರ ಪಿಂಚಣಿ ಹಣವನ್ನು ನೀಡಲಾಗದ ಶೋಚನೀಯ ಪರಿಸ್ಥಿತಿಯಲ್ಲಿರುವ ಸಂಸ್ಥೆಯ ಕೈ ಹಿಡಿಯಬೇಕಾದ ಸರ್ಕಾರ, ಬಿಆರ್‌ಟಿಎಸ್ ಗೆ ಹೆಚ್ಚಿನ ಅನುದಾನ ನೀಡಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಕೂಡಲೇ ಸರ್ಕಾರ, ಸಾರಿಗೆ ಮಂತ್ರಿಗಳು ಈ ಬಗ್ಗೆ ಗಮನಹರಿಸಿ, ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಮಾಡದೇ ವಾಯುವ್ಯ ಸಾರಿಗೆ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಬೇಕು ಅಂತಾರೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರು.
ಇನ್ನು ಎರಡು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಒಬ್ಬರೇ ಇದ್ದು, ಈ ರೀತಿಯಾಗಿ ಇಬ್ಬಗೆ ನೀತಿ ತೋರುತ್ತಿರೋದನ್ನು ಕಂಡೂ ಕಾಣದಂತೆ ಕುಳಿತಿದ್ದಾರೆ. ಇದೆಲ್ಲದರ ಹಿಂದೆ ಅವ್ಯವಹಾರದ ವಾಸನೆ ಮೂಡುತ್ತಿದ್ದು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಅವಕಾಶ ಇಲ್ಲ. ಹೀಗಾಗಿಯೇ ಬಿಆರ್‌ಟಿಎಸ್ ಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಂಡು ಹಣ ಹೊಡೆಯುವ ಹುನ್ನಾರ ನಡೆದಿದೆ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಇನ್ನಾದರೂ ಸಾರಿಗೆ ಈ ಸಚಿವರು ಇದೆಲ್ಲದರ ಬಗ್ಗೆ ಗಮನಹರಿಸುತ್ತಾರಾ? ಕಾದುನೋಡಬೇಕಿದೆ.
Kshetra Samachara
06/01/2021 01:07 pm