ಹುಬ್ಬಳ್ಳಿ: ಹಲ್ಲಿದ್ದಾಗ ಕಡಲೇ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಹೆಸರು ಬೆಳೆದ ರೈತರ ಸ್ಥಿತಿ. ಈ ವರ್ಷ ಅತಿಯಾದ ಮಳೆಯಿಂದ ಬೆಳೆಯೆಲ್ಲಾ ಕೊಳೆತು ಹೋಗಿವೆ. ಅಲ್ಪ ಸ್ವಲ್ಪ ಬೆಳೆ ಉಳಿದುಕೊಂಡಿದೆ. ಆದರೆ ಸರಕಾರ ಹೆಸರು ಖರೀದಿ ಕೇಂದ್ರ ಇನ್ನೂ ಆರಂಭ ಮಾಡದೆ ಇರೋದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.
ಹೌದು.. ಕಳೆದ ಮೂರು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ಹೆಸರು ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಹೆಸರು ಬೆಳೆ ನೀರು ಪಾಲಾಗಿ ಅಳಿದುಳಿದ ಬೆಳೆಯನ್ನು ಮಾರಾಟ ಮಾಡಲು ಕೂಡ ಖರೀದಿ ಕೇಂದ್ರ ಇಲ್ಲವಾಗಿದೆ. ಸರಕಾರ ಇದುವರೆಗೆ ಧಾರವಾಡ ಜಿಲ್ಲೆಯಲ್ಲಿ ಹೆಸರು ಖರೀದಿ ಕೇಂದ್ರ ಆರಂಭ ಮಾಡಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಲದಲ್ಲಿ ಹೆಸರು ರಾಶಿ ಹಾಕಿದ್ದು, ಒಂದಿಷ್ಟು ರೈತರು ಕಟಾವು ಮಾಡುತ್ತಿದ್ದಾರೆ. ಮತ್ತೆ ಮಳೆ ಬಂದರೆ ಬೆಳೆ ನೀರು ಪಾಲಾಗಲಿದೆ ಎನ್ನುವ ಆತಂಕ ರೈತರದ್ದು. 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 7200 ರೂಪಾಯಿ ಬೆಂಬಲ ಬೆಲೆಯಡಿಯಲ್ಲಿ ಸರಕಾರ ಖರೀದಿ ಮಾಡಬೇಕಿದೆ. ಆದರೆ ಇದುವರೆಗೆ ಸರಕಾರ ಮಾತ್ರ ಹೆಸರು ಖರೀದಿ ಕೇಂದ್ರ ಆರಂಭಿಸಿಲ್ಲ. ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಹುಬ್ಬಳ್ಳಿ ಭಾಗದಲ್ಲಿ ಹೆಚ್ಚಾಗಿ ಹೆಸರು ಬೆಳೆದಿದ್ದಾರೆ. ಈ ಹೆಸರು ಬೆಳೆದ ರೈತನಿಗೆ ಈಗ ದಿಕ್ಕು ದೋಚದಂತಾಗಿದೆ.
ಪ್ರತಿವರ್ಷ ಮಳೆಯಿಂದಾಗಿ ಹೆಸರು ಬೆಳೆ ಹಾಳಾಗುತ್ತಿತ್ತು. ಈ ವರ್ಷವೂ ಅದೇ ಸ್ಥಿತಿ ನಿರ್ಮಾಣವಾಗಿದೆ. ಅಲ್ಪ ಪ್ರಮಾಣದ ಫಸಲು ಬಂದಿದ್ದು ಸರಕಾರ ಸೂಕ್ತ ಸಮಯದಲ್ಲಿ ಖರೀದಿ ಕೇಂದ್ರ ಆರಂಭಿಸುವ ಮೂಲಕ ರೈತರ ನೆರವಿಗೆ ಬರಬೇಕಿದೆ.
Kshetra Samachara
24/08/2022 02:15 pm