ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನೇ ದಿನೇ ರಸಗೊಬ್ಬರಕ್ಕಾಗಿ ಅಲೆದಾಡುತ್ತಿರುವ ಅನ್ನದಾತರು ಕಂಗಾಲಾಗಿ ಧಾರವಾಡದಲ್ಲಿರುವ ಶಾಸಕ ಅರವಿಂದ ಬೆಲ್ಲದ ಅವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
ಸೊಸೈಟಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರವೇ ಸಿಗುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಬರೀ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಸದ್ಯ ಬಿತ್ತನೆ ಕಾರ್ಯ ಆರಂಭವಾಗಿದ್ದು, ಬಿತ್ತನೆಗೆ ಪೂರಕವಾದ ಡಿಎಪಿ ಗೊಬ್ಬರವೇ ಧಾರವಾಡದಲ್ಲಿ ಸಿಗುತ್ತಿಲ್ಲ. ಶಾಸಕ ಅರವಿಂದ ಬೆಲ್ಲದ ಅವರು ಸರ್ಕಾರದಲ್ಲಿದ್ದು, ಅವರು ಈ ಸಮಸ್ಯೆ ಬಗೆಹರಿಸಬೇಕು ಎಂದು ರೈತರು ಅವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬಿತ್ತನೆ ಸಮಯದಲ್ಲಿ ರಸಗೊಬ್ಬರ ಪೂರೈಕೆ ಮಾಡಿದರೆ ಅದು ಪ್ರಯೋಜನವಾಗುತ್ತದೆ. ಬಿತ್ತುವ ತತಿಯೇ ಮುಗಿದು ಹೋದ ಮೇಲೆ ಗೊಬ್ಬರ ಪೂರೈಕೆ ಮಾಡಿದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಧಾರವಾಡದಲ್ಲಿ ರಸಗೊಬ್ಬರದ ಅಭಾವ ಸೃಷ್ಠಿಯಾಗಿದ್ದು, ರೈತರು ಆಕ್ರೋಶಗೊಂಡಿದ್ದಾರೆ.
ಧಾರವಾಡದಲ್ಲಿರುವ ಶಾಸಕ ಅರವಿಂದ ಬೆಲ್ಲದ ಅವರ ನಿವಾಸಕ್ಕೆ ರೈತರು ಮುತ್ತಿಗೆ ಹಾಕುತ್ತಿದ್ದಂತೆ ಸ್ಥಳಕ್ಕೆ ಬಂದ ಕೃಷಿ ಇಲಾಖೆ ಅಧಿಕಾರಿಗಳು ರೈತರ ಮನವೊಲಿಕೆ ಮಾಡಿದರು. ಇವತ್ತು ಅಥವಾ ನಾಳೆ ಗೊಬ್ಬರ ಬರಲಿದ್ದು, ರೈತರಿಗೆ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
Kshetra Samachara
01/06/2022 01:16 pm