ಧಾರವಾಡ: ಸಾವಿನ ಹೆದ್ದಾರಿ ಎಂದು ಕರೆಯಿಸಿಕೊಳ್ಳುವ ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆಯ ಅಗಲೀಕರಣ ಇನ್ನೂ ಕನಸಿನ ಮಾತಾಗಿಯೇ ಉಳಿದಂತಾಗಿದೆ.
31 ಕಿಲೋ ಮೀಟರ್ ಉದ್ದದ ಈ ರಸ್ತೆ ಅಕ್ಕಪಕ್ಕ ಇರುವ ಜಮೀನುಗಳ ಸ್ವಾಧೀನಪಡಿಸಿಕೊಳ್ಳುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿತ್ತು. ಆದರೆ, ಇದಾಗಿ ಅನೇಕ ತಿಂಗಳು ಕಳೆದರೂ ರಸ್ತೆ ಮಾತ್ರ ಯತಾಸ್ಥಿತಿಯಲ್ಲಿದೆ ಈಗಲೂ ಈ ರಸ್ತೆ ಬಲಿ ಪಡೆದುಕೊಳ್ಳುತ್ತಲೇ ಇದೆ.
ಇಲ್ಲಿ ಪ್ರತಿನಿತ್ಯ ಬೈಕ್ ಸವಾರರು ಸಾವನ್ನಪ್ಪುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ವಾರಕ್ಕೊಮ್ಮೆಯಾದರೂ ದೊಡ್ಡ ಅಪಘಾತಗಳು ನಡೆಯುತ್ತಲೇ ಇವೆ. ಹುಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನಾಗೇಶ ಕಲಬುರ್ಗಿ ಅವರ ಪುತ್ರ ತಿಲಕ್ ಕಲಬುರ್ಗಿ ಕೂಡ ಇದೇ ಬೈಪಾಸ್ಗೆ ಇದೀಗ ಬಲಿಯಾಗಿದ್ದಾನೆ.
ಇದು ತಿಲಕ್ ಸಾವಿನ ಹೆದ್ದಾರಿ ಮಾತ್ರವಲ್ಲ. ನೂರಾರು ಜನ ಅಮಾಯಕರನ್ನು ಬಲಿ ಪಡೆದ ಹೆದ್ದಾರಿ. ಸಾವಿಗೆ ಸುಂಕ ಕಟ್ಟುವ ಹಾಗೆ ಸಾವಿನ ದಾರಿಗೆ ಬರಲು ಟೋಲ್ ಎಂಬ ಸುಂಕ ಕಟ್ಟಿ ಬರಬೇಕಾಗಿದೆ.
ಸರ್ಕಾರಗಳು ಹಾಗೂ ಈ ರಸ್ತೆ ನಿರ್ವಹಣಾ ಜವಾಬ್ದಾರಿ ಪಡೆದ ಏಜೆನ್ಸಿಯವರು ಹೆಣಗಳ ಮೇಲೆ ರಣಕೇಕೆ ಹಾಕುತ್ತಿದ್ದಾರೆ. ನಮ್ಮನ್ನಾಳುವ ಜನಪ್ರತಿನಿಧಿಗಳು ಹಾರಿಕೆ ಉತ್ತರ ಕೊಡುತ್ತಲೇ ಹೋಗುತ್ತಿದ್ದಾರೆ. ಈ ರಸ್ತೆ ಅಗಲೀಕರಣಕ್ಕೆ ಈಗಾಗಲೇ 1200 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ.
ಅಗಲೀಕರಣಕ್ಕೆ ಸಂಬಂಧಿಸಿದಂತೆ 547 ಕೋಟಿ ಮೊತ್ತದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಾಕಿ ಭೂಮಿಯನ್ನು ಶೀಘ್ರವೇ ಸ್ವಾಧೀನಪಡಿಸಿಕೊಂಡು ರಸ್ತೆ ಅಗಲೀಕರಣ ಮಾಡಲಾಗುವುದು. ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ ಎಂದ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಈ ರಸ್ತೆಗೆ ಸಂಬಂಧಿಸಿದಂತೆ 547 ಕೋಟಿ ಮೊತ್ತದ ಭೂಸ್ವಾಧೀನವಾಗಿದ್ದು, ಬಾಕಿ ಇರುವ ಭೂಮಿಯನ್ನು ಶೀಘ್ರವೇ ಸ್ವಾಧೀನಡಿಸಿಕೊಂಡು ರಸ್ತೆ ಅಗಲೀಕರಣಕ್ಕೆ ಕೈ ಹಾಕಲಾಗುವುದು ಎಂಬ ಉತ್ತರ ಸಚಿವರಿಂದ ಸಿಕ್ಕಿದ್ದು, ಈ ರಸ್ತೆ ಅಗಲೀಕರಣವಾಗಲು ಇನ್ನೂ ಎಷ್ಟು ದಿನ ಸಮಯ ತೆಗೆದುಕೊಳ್ಳುತ್ತದೆಯೋ ಇನ್ನೂ ಎಷ್ಟು ಜೀವಗಳನ್ನು ಈ ರಸ್ತೆ ಬಲಿ ಪಡೆದುಕೊಳ್ಳಲಿದೆಯೋ ದೇವರೆ ಬಲ್ಲ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/08/2022 08:07 am