ಒಬ್ಬ ಶಿಕ್ಷಕನ ಮಹತ್ವಾಕಾಂಕ್ಷೆ, ಆ ಆಕಾಂಕ್ಷೆಗೆ ಗ್ರಾಮಸ್ಥರ ಸಹಕಾರ, ದಾನಿಗಳ ಕೊಡುಗೆ, ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳ ಉತ್ಸಾಹ, ಸಹ ಶಿಕ್ಷಕರ ಪ್ರೋತ್ಸಾಹ. ಇದರ ಫಲವಾಗಿ ಇಲ್ಲೊಂದು ಶಾಲೆ ಅಭಿವೃದ್ಧಿ ಆಗೋ ಮೂಲಕ ರಾಜ್ಯ ಮಟ್ಟದಲ್ಲಿ ಸದ್ದು ಮಾಡಲು ಮುಂದಾಗಿದೆ.
ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೆ ಮುಖ್ಯೋಪಾಧ್ಯಾಯ ಎಫ್.ಪಿ.ತೆಗ್ಗಿನಕೇರಿ ಶಾಲೆಯ ಕೊಠಡಿ, ವಾತಾವರಣವನ್ನು ನೋಡಿದವರು ಹುಬ್ಬೆರುವಂತೆ ಮಾಡಿದ್ದಾರೆ.
ಗುಡೇನಕಟ್ಟಿ ಶಾಲೆ ಅಂಗಳದ ಹಸಿರು ತೋರಣ, ಎತ್ತ ನೋಡಿದರತ್ತ ಜ್ಞಾನಾರ್ಜನೆ ಅಕ್ಷರಗಳನ್ನು ಒಳಗೊಂಡ ಗೋಡೆಗಳು, ಆಧುನಿಕತೆಯ ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ, ಯೋಗದ ಪಾಠ, ಶಾಲೆಯಲ್ಲಿ ಅಳವಡಿಸಿದ ಮಳೆ ನೀರಿನ ಕೊಯ್ಲು, ಮಕ್ಕಳ ಓಡಾಟಕ್ಕೆ ಫೆವರ್ಸ್, ಅಬ್ಬಾ ! ಒಂದಾ, ಎರೆಡಾ ಸಂಪೂರ್ಣ ಶಾಲೆ ಚಿತ್ರಣವೇ ಅಭಿವೃದ್ಧಿ ಪಥದತ್ತ ಸಾಗಿದ್ದು, ಮಕ್ಕಳು ಶಾಲೆ ಅಂದ್ರೇ ಓಡೋಡಿ ಬರುವ ಸಂಭ್ರಮ ಗುಡೇನಕಟ್ಟಿಯ ಈ ಶಾಲೆ ಹೊಂದಿದೆ.
2020 ರಲ್ಲಿ ಗುಡೇನಕಟ್ಟಿ ಶಾಲೆಗೆ ವರ್ಗಾವಣೆಯಾಗಿ ಬಂದ ಮುಖ್ಯಶಿಕ್ಷಕ ಎಫ್.ಪಿ.ತೆಗ್ಗಿನಕೇರಿ ಪರಿಶ್ರಮ ಹಾಗೂ ಕೊಡುಗೈ ದಾನಿಗಳ ಫಲವಾಗಿ ಶಾಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಜಾದಿ ಕಾ ಅಮೃತ ಮಹೋತ್ಸವ ಪ್ರಶಸ್ತಿಗೂ ಭಾಜನವಾಗಿ 10 ಲಕ್ಷ ನಗದ ಹಾಗೂ ಗೌರವಕ್ಕೆ ಭಾಜನವಾಗಿದೆ.
ಸದಾ ಶಾಲೆಯ ಅಭಿವೃದ್ಧಿ ಬಗ್ಗೆ ಜಪಿಸೋ ಮುಖ್ಯ ಶಿಕ್ಷಕ ಎಫ್.ಪಿ.ತೆಗ್ಗಿನಕೇರಿ ಶಾಲಾ ಆರಂಭಕ್ಕೂ ಮೊದಲು ಶಾಲೆ ಬಿಟ್ಟ ಬಳಿಕವೂ ಹೆಚ್ಚಿನ ಸೇವೆ ಶಾಲೆ ಹಾಗೂ ಶಾಲಾ ಮಕ್ಕಳಿಗಾಗಿ ನೀಡಿದ್ದಾರೆ.
ಒಟ್ಟಾರೆ ಸರ್ಕಾರಿ ಶಾಲೆ ಎಂದ್ರೇ ಬೇಷ್ ಎನ್ನುವ ಮಟ್ಟಿಗೆ ಬದಲಾವಣೆ ಕಂಡ ಗುಡೇನಕಟ್ಟಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರವೂ ಲಭಿಸಿದ್ದು ಮುಖ್ಯ ಶಿಕ್ಷಕ ಎಫ್.ಪಿ.ತೆಗ್ಗಿನಕೇರಿ ಸೇವಾ ನಿವೃತ್ತಿ ಮಕ್ಕಳಲ್ಲಿ ಕಣ್ಣಿರು ತರಿಸಿದೆ.
-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
02/06/2022 04:19 pm