ಧಾರವಾಡ: 2015 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ಈಗ ಕೇಳಿ ಬಂದಿದೆ.
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಧಾರವಾಡದ ಅಭ್ಯರ್ಥಿಗಳು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು. ಈ ಹೋರಾಟದ ಪ್ರತಿಫಲವಾಗಿ ಇದೀಗ ಪಿಎಸ್‌ಐ ನೇಮಕಾತಿಯನ್ನೇ ಸರ್ಕಾರ ರದ್ದುಗೊಳಿಸಿದೆ. ಅಲ್ಲದೇ ಇದರ ಹಿಂದೆ ಇದ್ದ ಕಿಂಗ್‌ಪಿನ್‌ಗಳನ್ನು ಕಂಬಿ ಹಿಂದೆ ತಳ್ಳಿದೆ.
ಈಗ ಅದೇ ರೀತಿ 2015ರಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲೂ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
2015ರಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಯಿತು. 2017 ಕ್ಕೆ ಪೂರ್ವಭಾವಿ ಪರೀಕ್ಷೆ ನಡೆಸಿ, 2017ರ ಡಿಸೆಂಬರ್ ತಿಂಗಳಲ್ಲಿ ಮುಖ್ಯ ಪರೀಕ್ಷೆ ಹಾಗೂ ಆಗಸ್ಟ್ ತಿಂಗಳಿನಿಂದ ಅಕ್ಟೋಬರ್‌ವರೆಗೆ 2019ರಲ್ಲಿ ಸಂದರ್ಶನ ನಡೆಸಿ, ಡಿಸೆಂಬರ್ 2019ರಂದು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಯಿತು. ಆದರೆ ಈ ಆಯ್ಕೆ ಪಟ್ಟಿಯಲ್ಲಿ 428 ಹುದ್ದೆಗಳ ಪೈಕಿ 80 ರಿಂದ 100 ಹುದ್ದೆಗಳನ್ನು ಗೋಲ್‌ಮಾಲ್ ಮುಖಾಂತರ ಭರ್ತಿ ಮಾಡಲಾಗಿದೆ ಎಂದು ಪರೀಕ್ಷೆ ಬರೆದ ಅಭ್ಯರ್ಥಿ ರಮೇಶ ಆರೋಪಿಸಿದ್ದಾರೆ.
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದ ಬೆನ್ನಲ್ಲೇ ಇದೀಗ ವಿವಿಧ ಇಲಾಖೆಗಳಲ್ಲೂ ಅಕ್ರಮ ನಡೆದ ಬಗ್ಗೆ ವಿಷಯಗಳು ಹೊರ ಬೀಳುತ್ತಲೇ ಇವೆ. ಇದೀಗ ಕೆಪಿಎಸ್‌ಸಿ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ವಿಷಯ ಮುನ್ನೆಲೆಗೆ ಬಂದಿದ್ದು, ಈ ಬಗ್ಗೆ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.
Kshetra Samachara
30/04/2022 04:19 pm