ಧಾರವಾಡ: ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಭೂಮಿ ಕಳೆದುಕೊಂಡ ಸಂತ್ರಸ್ಥ ಮಹಿಳೆಯೊಬ್ಬರು ತನಗೆ ಪರಿಹಾರ ನೀಡುವಂತೆ ಕೆಐಎಡಿಬಿ ಅಧಿಕಾರಿಗೆ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಪ್ರಸಂಗ ಧಾರವಾಡದಲ್ಲಿ ನಡೆದಿದೆ.
ಇಟಿಗಟ್ಟಿ ಗ್ರಾಮದ ಅಕ್ಕವ್ವ ಲಕ್ಕಪ್ಪನವರ ಎಂಬ ಮಹಿಳೆಯೇ ಇದೀಗ ಅಸಹಾಯಕಳಾಗಿ ಅಧಿಕಾರಿ ಕಾಲಿಗೆ ಬಿದ್ದಿದ್ದಾರೆ. ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಅಕ್ಕವ್ವ ಅವರಿಗೆ ಸೇರಿದ ಒಂದು ಎಕರೆ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಇದರಲ್ಲಿ ಅಕ್ಕವ್ವಳಿಗೆ 55 ಲಕ್ಷ ಪರಿಹಾರ ಬರಬೇಕಿದೆ. ಆದರೆ, ಈ ಹಣ ಅಧಿಕಾರಿಗಳ ಅಚಾತುರ್ಯದಿಂದ ಆಕೆಯ ಕೈ ಸೇರಿಲ್ಲ. ಇದರಿಂದ ದಿಕ್ಕು ತೋಚದ ಅಕ್ಕವ್ವ ಕೆಐಎಡಿಬಿ ಕಚೇರಿಗೆ ಬಂದು ಅಧಿಕಾರಿ ಕಾಲಿಗೆ ಬಿದ್ದು ತನಗೆ ಬರಬೇಕಾದ ಪರಿಹಾರವನ್ನು ನೀಡುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾಳೆ.
ಅಕ್ಕವ್ವಳಿಗೆ ಸೇರಬೇಕಾದ ಪರಿಹಾರ ಮೊತ್ತವನ್ನು ಕೆಐಎಡಿಬಿ ಅಧಿಕಾರಿಗಳು ಆಕೆಯ ಸಹೋದರನ ಅಕೌಂಟ್‌ಗೆ ನೆಫ್ಟ್ ಮಾಡಿದ್ದಾರೆ. ದಾಖಲೆಗಳಲ್ಲಿ ಅಕ್ಕವ್ವ ಅವರ ಸಹಿ ಇದೆ. ಆದರೆ, ಆಕೆ ಕಚೇರಿಗೆ ಬರದೇ ಇದ್ದರೂ ನಕಲಿ ಸಹಿ ಸೃಷ್ಠಿಸಿ ಆಕೆಯ ಸಹೋದರನ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದೇ ವಿಷಯವನ್ನು ಕೇಳಲು ಬಂದ ಅಕ್ಕವ್ವಳಿಗೆ ಅಧಿಕಾರಿಗಳು ಹಾರಿಕೆ ಉತ್ತರ ಕೊಟ್ಟಿದ್ದಾರೆ.
ಅಕ್ಕವ್ವ ಅವರ ಸಹೋದರನ ಬ್ಯಾಂಕ್ ಖಾತೆಗೆ ಅಧಿಕಾರಿಗಳು ಒಟ್ಟು 4 ಕೋಟಿ 8 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅಕ್ಕವ್ವ ಅವರಿಗೆ 55 ಲಕ್ಷ ಪರಿಹಾರ ಬರಬೇಕಿದೆ. ಅಕ್ಕವ್ವ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡದ ಅಧಿಕಾರಿಗಳು ಆಕೆಯ ಸಹೋದರನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದನ್ನು ನೋಡಿದರೆ ಇದರಲ್ಲಿ ಗೋಲ್‌ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
Kshetra Samachara
30/04/2022 06:29 pm