ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ರಾಯಭಾರಿಯಾಗಿ ನನ್ನನ್ನು ಆಯ್ಕೆ ಮಾಡಿರುವುದು ನನಗೆ ಖುಷಿ ತಂದಿದೆ. ಅಲ್ಲದೇ ರಾಯಭಾರಿಯಾಗಿರುವುದು ನನ್ನ ಸೌಭಾಗ್ಯ ಎಂದು ಚಿತ್ರನಟ ಹಾಗೂ ಪಾಲಿಕೆ ರಾಯಭಾರಿ ಅನಿರುದ್ಧ ಹೇಳಿದರು.
ಆದರ್ಶನಗರದ ಕರ್ಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿ ಮಾತನಾಡಿದ ಅವರು, ಈಗಾಗಲೇ ನಾನು ಹುಬ್ಬಳ್ಳಿ ಧಾರವಾಡ ಅವಳಿನಗರವನ್ನು ಓಡಾಡಿದ್ದೇನೆ. ಅಲ್ಲದೇ ಸ್ಥಳೀಯವಾಗಿ ಪರಿಶೀಲನೆ ನಡೆಸಿದ್ದೇನೆ. ಅವಳಿನಗರದಲ್ಲಿ ಸರಿಯಾದ ರೀತಿಯಲ್ಲಿ ಕಸವನ್ನು ಹಸಿಕಸ, ಒಣಕಸ, ಪ್ಲಾಸ್ಟಿಕ್ ಹಾಗೂ ಮರುಬಳಕೆಯ ತ್ಯಾಜ್ಯವನ್ನು ಮನೆಯಿಂದಲೇ ವಿಂಗಡಣೆ ಆಗಬೇಕು ಎಂದರು.
ಕಸ ವಿಂಗಡಣೆ ಮಾಡಿ ಕೊಡುವಂತ ಮನೆಗಳಿಗೆ ರಿಯಾಯಿತಿ ನೀಡಿ. ಅಲ್ಲದೇ ಕಸ ವಿಂಗಡಣೆ ಬಗ್ಗೆ ಪಾಲಿಕೆಯೇ ಮುತುವರ್ಜಿಯಿಂದ ನಿರ್ವಹಣೆ ಮಾಡಬೇಕಿದೆ. ಕಸದಿಂದ ಹಣ ಬರುವಂತದ್ದು, ಆದಾಗ ಮಾತ್ರ ಜನರು ಕಸವನ್ನು ಬೇಕಾಬಿಟ್ಟಿಯಾಗಿ ಎಸೆಯುವುದಿಲ್ಲ ಎಂದು ಅವರು ಹೇಳಿದರು.
ಕಳೆದ ಮೂರು ದಿನಗಳಿಂದ ಅವಳಿನಗರದ ಓಡಾಡಿದ್ದೇನೆ. ಎಲ್ಲೆಂದರಲ್ಲಿ ಹುಲ್ಲು ಬೆಳೆದಿದೆ. ಅಲ್ಲದೇ ಎಲ್ಲೆಂದರಲ್ಲಿ ಕಂಬಗಳು ಬಾಗಿವೆ. ಅವುಗಳಿಗೆ ಸೂಕ್ತ ಮುಕ್ತಿ ನೀಡುವ ಕಾರ್ಯವನ್ನು ಪಾಲಿಕೆ ಮಾಡಬೇಕಿದೆ. ಜಾಹೀರಾತು ಫಲಕಗಳ ಬಗ್ಗೆ ಪಾಲಿಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸ್ಮಾರ್ಟ್ ಪೋಲ್ ಹಾಗೂ ಡಿಜಿಟಲ್ ಜಾಹೀರಾತಿನ ಬಗ್ಗೆ ಪಾಲಿಕೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಪಾಲಿಕೆಗೆ ಸಲಹೆ ನೀಡಿದರು.
ಹು-ಧಾ ಮಹಾನಗರದಲ್ಲಿ ಕೇಬಲ್ ಜೋತಾಡುತ್ತಿವೆ. ಅವುಗಳು ಭೂಗತವಾಗಬೇಕು. ಇವುಗಳ ಸರಿಯಾದ ರೀತಿಯಲ್ಲಿ ನಿರ್ವಹಣೆ ಆಗದೇ ಇದ್ದರೇ ಅಪಘಾತಗಳು ಸಂಭವಿಸುತ್ತವೆ. ಮರಗಳಿಗೆ ಮೊಳೆ ಹೊಡೆಯುವ ನಿರ್ಧಾರವನ್ನು ಸಾರ್ವಜನಿಕರು ಕೈ ಬಿಡಬೇಕು. ಆಮ್ಲಜನಕ ನೀಡುವ ಮರಗಳಿಗೆ ನಾವು ಈ ರೀತಿಯಲ್ಲಿ ಸಮಸ್ಯೆಗಳನ್ನುಂಟು ಮಾಡಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಇನ್ನೂ ಸುಲಭ ಶೌಚಾಲಯಗಳ ಬಗ್ಗೆ ಹೇಳಿದ್ದೇನೆ. ಬಹುತೇಕ ಕಡೆಯಲ್ಲಿ ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇಂತಹ ವ್ಯವಸ್ಥೆಗೆ ಪಾಲಿಕೆ ಸೂಕ್ತ ನಿರ್ಧಾರದ ಮೂಲಕ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/06/2022 10:25 pm