ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕೆಲವು ಇಲಾಖೆಗಳು ಇನ್ನೂ ಕೂಡ ಅಪ್ಡೇಟ್ ಆಗಿಲ್ಲ. ಇನ್ನೂ ಹಳೆ ಕಾಲದ ರೀತಿಯ ಅಧಿಕಾರಿಗಳ ಕಾರ್ಯನಿರ್ವಹಣೆ ಜನರನ್ನು ನಾನಾ ಸಂಕಷ್ಟಕ್ಕೆ ಗುರಿಯಾಗಿಸುತ್ತಿದೆ. ಇದಕ್ಕೆ ಬೆಸ್ಟ್ ಉದಾಹರಣೆ ಅಂದರೆ ಆಟೋ ದರ ನಿಯಂತ್ರಣ. ಜಿಲ್ಲಾಡಳಿತ, ಆರ್ ಟಿ ಓ ಮತ್ತು ಪೊಲೀಸ್ ಇಲಾಖೆಯ ಹೊಂದಾಣಿಕೆ ಕೊರತೆ ಮತ್ತು ನಿರ್ಲಕ್ಷ್ಯ ಧೋರಣೆ ನೀತಿಯಿಂದ ಆಟೋ ಚಾಲಕರು ಆಡಿದ್ದು ಆಟವಾಗಿ ಸಾರ್ವಜನಿಕರು ಹಿಂಸೆ ಅನುಭವಿಸುವಂತಾಗಿದೆ.
ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ಕಂಗಾಲಾಗಿರುವ ಜನರಿಗೆ ಸಾರಿಗೆ ವೆಚ್ಚದ ಬಿಸಿಯೂ ತಟ್ಟಿದೆ. ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆ ಏರಿಕೆ ನೆಪಯಿಟ್ಟುಕೊಂಡು ಆಟೊ ಚಾಲಕರು ಹಗಲು ದರೋಡೆ ಮಾಡುತ್ತಿದ್ದಾರೆ. ಇನ್ನೂ ಹುಬ್ಬಳ್ಳಿ ಆಟೋಗಳಲ್ಲಿ ಮೀಟರ್ ಯಾವತ್ತೂ ಓಡೋದೆ ಇಲ್ಲ. ಚಾಲಕರು ಹೇಳಿದ್ದೆ ರೇಟ್ ಗೆ ಪ್ರಯಾಣ ಮಾಡಬೇಕು.
ಇನ್ನೂ ರಾತ್ರಿ ಹೊತ್ತು ಪ್ರಯಾಣ ಮಾಡುವವರ ಜೇಬಿಗೆ ಕತ್ತರಿ ಗ್ಯಾರಂಟಿ. ಯಾಕೆಂದರೆ ಬರೀ ಒಂದು ಕಿಲೋಮೀಟರ್ ಗೆ 300 ರಿಂದ 400 ಕೇಳುತ್ತಾರೆ. ಇನ್ನೂ ರೋಡ್ ಸರಿಯಿಲ್ಲ, ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ ಅಂತ ಸಂಬಂಧವೇ ಇಲ್ಲದ ನೆಪ ಹೇಳಿ, ಹಗಲೊತ್ತಿನಲ್ಲಿ ಸಹ ಮೀಟರ್ ಹಾಕುವುದಿಲ್ಲ. ಇದರ ಬಗ್ಗೆ ಸಾರಿಗೆ ಆಯುಕ್ತರನ್ನ ಕೇಳಿದರೇ ಹೇಳುವುದು ಹೀಗೆ.
ಇಂತಹ ಪರಿಸ್ಥಿತಿಯಿದ್ದರೂ ಪೊಲೀಸ್ ಇಲಾಖೆಯಾಗಲಿ, ಆರ್ ಟಿಓ ಅಧಿಕಾರಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪ್ರತಿ ವರ್ಷ ಆಟೋದರ ಪರಿಶೀಲನೆ ಮಾಡಿ ಕಾಲಕ್ಕೆ ತಕ್ಕಂತೆ ದರ ನಿಯಂತ್ರಣ ಮಾಡಬೇಕೆಂಬ ನಿಯಮವಿದೆ. ಹೀಗಾಗಿ ಜಿಲ್ಲಾಧಿಕಾರಿ, ಪ್ರಾದೇಶಿಕ ರಸ್ತೆ ಸಾರಿಗೆ ಆಯುಕ್ತ ಮತ್ತು ಎಸ್ಪಿ ಒಳಗೊಂಡ ಸಮಿತಿ ಸಹ ರಚನೆಯಾಗಿರುತ್ತದೆ.
ವಿಪರ್ಯಾಸವೆಂದರೆ ಧಾರವಾಡ ಜಿಲ್ಲೆಯಲ್ಲಿ ಈ ಸಮಿತಿ ಈ ಬಗ್ಗೆ ಸಭೆ ನಡೆಸಿ ನಾಲ್ಕು ವರ್ಷಗಳು ಕಳೆದಿವೆ. 2018ರಲ್ಲಿ ಅಂದಿನ ಡಿಸಿ ದೀಪಾ ಚೋಳನ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಟೋ ದರ ನಿಗದಿಪಡಿಸಲಾಗಿದೆ. ಅದರಂತೆ ಪ್ರತಿ ಕಿಲೊಮೀಟರ್ 28 ರೂ ತದನಂತರದಲ್ಲಿ 15 ರೂ, ವೈಟಿಂಗ್ ಚಾರ್ಜ್ 15 ಮತ್ತು 20 ಕೆಜಿಗೆ ಮೇಲ್ಪಟ್ಟ ಲಗೇಜ್ 20ರೂ ಅಂತ ದರ ನಿಗದಿ ಮಾಡಲಾಗಿದೆ. ಆದರೆ ಇದು ಕೇವಲ ದಾಖಲೆಯಲ್ಲಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ.
ಕಳ್ಳನಿಗೊಂದು ಪಿಳ್ಳೆ ನೆಪ ಎನ್ನುವ ಗಾದೆ ಹುಬ್ಬಳ್ಳಿ ಆಟೋ ಚಾಲಕರಿಗೆ ಮತ್ತು ಅಧಿಕಾರಿಗಳಿಗೆ ಸದ್ಯ ಸೂಟ್ ಆಗುತ್ತಿದೆ. ಒಂದು ಕಡೆ ರಸ್ತೆ ಸರಿಯಿಲ್ಲ, ಬೆಲೆ ಏರಿಕೆ ಅಂತ ಆಟೋ ಚಾಲಕರು ನೆಪ ಹೇಳುತ್ತಾರೆ. ಮತ್ತೊಂದು ಕಡೆ ಆಟೋ ದರ ನಿಯಂತ್ರಣ ಸಭೆ ನಡೆದಿಲ್ಲ ಅದಕ್ಕೆ ಏನು ಮಾಡೋದಕ್ಕೆ ಆಗಲ್ಲಂತ ಅಧಿಕಾರಿಗಳು ನೆಪ ಹೇಳತ್ತಾರೆ. ಈ ಇಬ್ಬರ ನೆಪಗಳಲ್ಲಿ ಬಲಿಯಾಗುತ್ತಿರುವುದು ಮಾತ್ರ ಜನ ಸಾಮನ್ಯರು ಎಂಬುವುದು ವಿಪರ್ಯಾಸ.
Kshetra Samachara
05/04/2022 12:34 pm