ಧಾರವಾಡ: ಜಿಲ್ಲೆಯಲ್ಲಿ ಡಿಸೆಂಬರ್ 22 ರಂದು ಜರುಗುವ ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ಡಿ.12 ರಂದು ಬೆಳಿಗ್ಗೆ 11 ಗಂಟೆಯಿಂದ ಆಯಾ ಗ್ರಾಮ ಪಂಚಾಯತ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಜರುಗಲಿದೆ.
ಮತ್ತು ಡಿ.14 ರಂದು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆಯಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಮಪತ್ರಗಳ ಪರಿಶೀಲನೆಯನ್ನು ಸ್ವತಃ ಚುನಾವಣಾಧಿಕಾರಿಯೇ ಮಾಡುತ್ತಾರೆ.
ಪ್ರತಿ ಅಭ್ಯರ್ಥಿ ಸಲ್ಲಿಸುವ ಎಲ್ಲಾ ನಾಮಪತ್ರಗಳನ್ನು ಒಂದರ ನಂತರ ಒಂದರಂತೆ ಪರಿಶೀಲಿಸಲಾಗುತ್ತದೆ. ನಾಮಪತ್ರಗಳಲ್ಲಿ ಅಭ್ಯರ್ಥಿ ಹಾಗೂ ಸೂಚಕನ ಸಹಿ ಇಲ್ಲದಿದ್ದಲ್ಲಿ ನಾಮಪತ್ರಗಳನ್ನು ತಿರಸ್ಕರಿಸಲಾಗುತ್ತದೆ.
ರಾಜ್ಯ ಚುನಾವಣಾ ಆಯೋಗವು ನಿಗದಿಪಡಿಸಿದ ಘೋಷಣಾ ಪತ್ರಗಳನ್ನು ಆಭ್ಯರ್ಥಿಯು ನೀಡದೆ ಹೋಗಿದಲ್ಲಿ ಅಂತಹ ನಾಮಪತ್ರವನ್ನು ಒಪ್ಪಿಕೊಳ್ಳಲಾಗುವುದಿಲ್ಲ.
ಠೇವಣಿ ಹಣವನ್ನು ನೀಡಿಲ್ಲದ ಅಭ್ಯರ್ಥಿಯ ನಾಮಪತ್ರವು ಅಸಿಂಧುವಾಗುತ್ತದೆ. ಮೀಸಲಿರುವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರ್ಹರಾಗುವ ಅಭ್ಯರ್ಥಿಗಳ ನಾಮಪತ್ರಗಳನ್ನು ಮಾತ್ರ ಒಪ್ಪಿಕೊಳ್ಳಲಾಗುತ್ತದೆ.
ಗ್ರಾಮ ಪಂಚಾಯಿತಿಯ ಸದಸ್ಯನಾಗಲು 21 ವರ್ಷ ವಯಸ್ಸಾಗಿರಬೇಕು. ಅಭ್ಯರ್ಥಿ ಹಾಗೂ ಸೂಚಕನು ಆ ಗ್ರಾಮ ಪಂಚಾಯಿತಿಯ ಮತದಾರನಾಗಿರಬೇಕು.
ಅವರ ಹೆಸರು ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ದಪಡಿಸಿರುವ ಮತದಾರರ ಪಟ್ಟಿಯಲ್ಲಿ ಇರಬೇಕು. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 12ರಡಿಯಲ್ಲಿ ಅನರ್ಹತೆಗೆ ಒಳಗಾಗಿರಬಾರದು.
ನಾಮಪತ್ರಗಳ ಪರಿಶೀಲನೆಯ ನಂತರ ಡಿಸೆಂಬರ್ 14ರ ಬೆಳಿಗ್ಗೆ 11 ಗಂಟೆಯಿಂದ ಉಮೇದುವಾರಿಕೆ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಅಥವಾ ಅವರಿಂದ ಅಧಿಕೃತಗೊಂಡ ಏಜೆಂಟರಿಗೆ ಸ್ವಿಕೃತಿಯಾಗಿರುವ ನಾಮಪತ್ರ ಹಿಂಪಡೆಯಲು ಅವಕಾಶವಿರುತ್ತದೆ.
ಅದೇ ದಿನ ಮಧ್ಯಾಹ್ನ 3 ಗಂಟೆ ನಂತರ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ತಯಾರು ಮಾಡಲಾಗುತ್ತದೆ.
ಒಂದು ಕ್ಷೇತ್ರಕ್ಕೆ ಅಥವಾ ಒಂದು ಕ್ಷೇತ್ರದಲ್ಲಿನ ಮೀಸಲು ಸ್ಥಾನಕ್ಕೆ ಒಬ್ಬ ಅಭ್ಯರ್ಥಿ ಮಾತ್ರ ಉಳಿದಲ್ಲಿ ಅದನ್ನು ಅವಿರೋಧ ಆಯ್ಕೆ ಎಂದು ಪರಿಗಣಿಸಿ, ಚುನಾವಣಾ ಅಧಿಕಾರಿಯು ಜಿಲ್ಲಾ ಚುನಾವಣಾಧಿಕಾರಿಗಳಿಗೆ ವರದಿ ನೀಡುತ್ತಾರೆ.
ಒಂದು ಕ್ಷೇತ್ರದಲ್ಲಿ ಅಥವಾ ಒಂದು ಕ್ಷೇತ್ರದಲ್ಲಿನ ಮೀಸಲು ಸ್ಥಾನಗಳಿಗೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇದ್ದಲ್ಲಿ ನಿಗದಿತ (ಡಿ.22 ರಂದು) ದಿನಾಂಕ ದಂದು ಸಾರ್ವತ್ರಿಕ ಚುನಾವಣೆ ಜರುಗಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
ಪ್ರಪತ್ರ -7 ರಲ್ಲಿ ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕವಾಗಿ ಸಿಂಧುವಾದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಉಮೇದುವಾರರ ಹೆಸರುಗಳನ್ನು ಕನ್ನಡ ಅಕ್ಷರ ಮಾಲೆಯ ಕ್ರಮದಂತೆ ನಮೂದಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
11/12/2020 02:09 pm