ಹುಬ್ಬಳ್ಳಿ: ಅದು ರಾಜ್ಯದ ಮೂರನೇ ಹೆಚ್ಚು ದಟ್ಟಣೆಯದ್ದು ಎಂದು ಗುರುತಿಸಿಕೊಂಡಿರುವ ವಿಮಾನ ನಿಲ್ದಾಣ.ಹಲವಾರು ಯೋಜನೆ ಮೂಲಕ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಮಾನ ನಿಲ್ದಾಣ ಈಗ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗುವತ್ತ ಹೆಜ್ಜೆ ಇಟ್ಟಿದೆ.ಯಾವುದು ಆ ನಿಲ್ದಾಣ ಏನಿದು ಮೈಲಿಗಲ್ಲು ಅಂತೀರಾ ಈ ಸ್ಟೋರಿ ನೋಡಿ...
ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ 8 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ‘ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಮುಂದಾಗಿದ್ದು,ಮೂರ್ನಾಲ್ಕು ತಿಂಗಳಲ್ಲಿ ಸೋಲಾರ್ ವಿದ್ಯುತ್ ಘಟಕ ಪೂರ್ಣಗೊಂಡು ಆ ಮೂಲಕ ರಾಜ್ಯದ ಇತರ ನಿಲ್ದಾಣಗಳಿಗೆ ವಿದ್ಯುತ್ ಪೂರೈಸಲಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ರಾಜ್ಯದಲ್ಲೇ ಮೊದಲ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ 64 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದೆ.ಇದಕ್ಕಾಗಿ ಗುಜರಾತ್ ಮೂಲದ ‘ಮಾಧವ ಇನ್ಫ್ರಾ ಪ್ರಾಜೆಕ್ಟ್’ ಕಂಪನಿಗೆ 33 ಕೋಟಿ ರೂ.ಗೆ ಟೆಂಡರ್ ನೀಡಿದೆ.
ಮಾರ್ಚ್ ಅಂತ್ಯದೊಳಗೆ ಸೋಲಾರ್ ಘಟಕ ಅಳವಡಿಕೆ ಕಾರ್ಯ ಪೂರ್ಣಗೊಳಿಸಲು ಗುರಿ ನೀಡಿದ್ದು, 5 ವರ್ಷದವರೆಗೆ ಇದೇ ಕಂಪನಿ ನಿರ್ವಹಣೆಯನ್ನೂ ನೋಡಿಕೊಳ್ಳಲಿದೆ.
ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸಿದ್ಧತೆ ನಡೆದಿರುವುದು.ಸೋಲಾರ್ ಘಟಕ ಸ್ಥಾಪನೆಗೆ ರನ್ ವೇ ದಕ್ಷಿಣ ಭಾಗದಲ್ಲಿ 38 ಎಕರೆ ಜಮೀನು ಗುರುತಿಸಲಾಗಿದೆ. 24 ಎಕರೆ ವ್ಯಾಪ್ತಿಯಲ್ಲಿ 400 ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಲಾಗುತ್ತದೆ. ಉಳಿದ ಜಾಗದಲ್ಲಿ ಟ್ರಾನ್ಸ್ಫಾರ್ಮರ್ಸ್, ನಿರ್ವಹಣಾ ಕೊಠಡಿ, ವಿದ್ಯುತ್ ಸಂಗ್ರಹಣಾ ಕೊಠಡಿ ನಿರ್ವಣಕ್ಕೆ ಬಳಸಲಾಗುತ್ತದೆ.
ಉತ್ಪಾದನೆಯಾದ ವಿದ್ಯುತ್ಅನ್ನು ಸಮೀಪದ ತಾರಿಹಾಳದ ವಿದ್ಯುತ್ ಘಟಕಕ್ಕೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಮಣ್ಣು ಪರೀಕ್ಷೆ, ಸೈಟ್ ಸಮೀಕ್ಷೆ, ಕೇಬಲ್ ಅಳವಡಿಕೆ, ಟ್ರಾನ್ಸ್ಫಾರ್ಮರ್ಗಳ ಅಳವಡಿಕೆ ಸೇರಿ ಇತರೆ ಕೆಲಸಗಳು ಪೂರ್ಣಗೊಂಡಿವೆ. ಸೋಲಾರ್ ಪ್ಯಾನಲ್ ಅಳವಡಿಕೆ ಮತ್ತಿತರ ಕೆಲಸ ಬಾಕಿ ಇವೆ.
ರಾಜ್ಯದ ಎಎಐ ಅಧೀನದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ವಾರ್ಷಿಕ ಸುಮಾರು 131 ಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗುತ್ತದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಸೋಲಾರ್ ಘಟಕ ವಾರ್ಷಿಕ 140 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರಿಂದ ಕೋಟ್ಯಂತರ ರೂ. ವಿದ್ಯುತ್ ಶುಲ್ಕ ಉಳಿತಾಯವಾಗುತ್ತದೆ.
ಹಸಿರು ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಉತ್ತೇಜಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಸೋಲಾರ್ ಘಟಕ ಸ್ಥಾಪನೆಗೆ ಮುಂದಾಗಿದೆ. ಖಾಸಗಿ ಒಡೆತನದಲ್ಲಿರುವ ಬೆಂಗಳೂರು ಕೆಂಪೇಗೌಡ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರತುಪಡಿಸಿ ಮೈಸೂರು, ಬೆಳಗಾವಿ, ಕಲಬುರಗಿ, ಎಚ್ಎಎಲ್ ವಿಮಾನ ನಿಲ್ದಾಣಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಮೂಲಕ ವಿದ್ಯುತ್ ಪೂರೈಸಲಿದೆ.
Kshetra Samachara
10/12/2020 01:35 pm