ಹುಬ್ಬಳ್ಳಿ: ಸಾರ್ವಜನಿಕರ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ ಮತ್ತು ರಾಣಿಬೆನ್ನೂರು ನಡುವೆ ತಡೆರಹಿತ ಬಸ್ಸುಗಳ ಸಂಚಾರವನ್ನು ಆರಂಭಿಸಲಾಗಿದೆ.ಈ ಬಸ್ಸುಗಳು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಹುಬ್ಬಳ್ಳಿಯಿಂದ ರಾಣಿಬೆನ್ನೂರು ಮೂಲಕ ಸಂಚರಿಸುತ್ತಿರುವ ವೇಗದೂತ ಬಸ್ಸುಗಳಿಗೆ ಮಾರ್ಗ ಮಧ್ಯದಲ್ಲಿ ಹಲವಾರು ಸ್ಥಳಗಳಲ್ಲಿ ನಿಲುಗಡೆ ನೀಡಲಾಗುತ್ತಿದೆ. ಮತ್ತು ಮುಖ್ಯ ರಸ್ತೆಯಿಂದ ಊರುಗಳ ಒಳಗೆ ಬಸ್ ನಿಲ್ದಾಣಗಳಿಗೆ ಹೋಗಿ ಬರುತ್ತವೆ.
ತಡೆ ರಹಿತ ಬಸ್ಸುಗಳು ಹುಬ್ಬಳ್ಳಿಯಿಂದ ರಾಣಿಬೆನ್ನೂರಿಗೆ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಪಾಸ್ ಮೂಲಕ ಸಂಚರಿಸುತ್ತವೆ.ಹೀಗಾಗಿ ಪ್ರಯಾಣದ ಅವಧಿಯಲ್ಲಿ ಅರ್ಧ ತಾಸಿನಷ್ಟು ಉಳಿತಾಯವಾಗಲಿದೆ.ಇದರೊಂದಿಗೆ ಮಾರ್ಗಮಧ್ಯದ ಊರುಗಳಲ್ಲಿನ ಸಂಚಾರ ದಟ್ಟಣೆ, ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕಾಯುವ ಕಿರಿಕಿರಿ ತಪ್ಪುತ್ತದೆ. ಮತ್ತು ತಡೆರಹಿತ, ಅರಾಮದಾಯಕ ಪ್ರಯಾಣದ ಅನುಭವ ದೊರೆಯುತ್ತದೆ. ಇದರಿಂದ ವಾಣಿಜ್ಯ-ವ್ಯವಹಾರ ಮತ್ತಿತರ ಅಗತ್ಯದ ಕೆಲಸ ಕಾರ್ಯಗಳಿಗಾಗಿ ನಿತ್ಯ ಅಥವಾ ಮೇಲಿಂದ ಮೇಲೆ ಹುಬ್ಬಳ್ಳಿ - ರಾಣಿಬೆನ್ನೂರು ನಡುವೆ ಸಂಚರಿಸುವ ಸಾವಿರಾರು ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಈಗಾಗಲೆ, ಹುಬ್ಬಳ್ಳಿಯಿಂದ ಗದಗ,ಬೆಳಗಾವಿ, ಹಾವೇರಿ ಮತ್ತಿತರ ಸ್ಥಳಗಳ ನಡುವೆ ತಡೆರಹಿತ ಬಸ್ಸುಗಳನ್ನು ಕಾರ್ಯಾಚರಣೆ ಮಾಡುತ್ತಿದ್ದು ಅಪಾರ ಜನಮೆಚ್ಚುಗೆ ಗಳಿಸಿವೆ. ಈ ಹಿನ್ನೆಲೆಯಲ್ಲಿ ಇದೀಗ ಹುಬ್ಬಳ್ಳಿ - ರಾಣಿಬೆನ್ನೂರು ನಡುವೆ ತಡೆರಹಿತ ಬಸ್ಸುಗಳ ಸಂಚಾರ ಆರಂಭಿಸಲಾಗಿದೆ.
ಮೊದಲ ಹಂತದಲ್ಲಿ ಹುಬ್ಬಳ್ಳಿ- ರಾಣಿಬೆನ್ನೂರು ನಡುವೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಅರ್ಧ ತಾಸಿಗೊಂದರಂತೆ ಬಸ್ಸುಗಳ ಕಾರ್ಯಾಚರಣೆ ಮಾಡಲಾಗುತ್ತದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ಬಸ್ಸುಗಳನ್ನು ಹೆಚ್ಚಿಸಲಾಗುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
Kshetra Samachara
11/11/2020 09:50 am