ಹುಬ್ಬಳ್ಳಿ: ಅದು ಸುಮಾರು ಐದಾರು ಊರಿಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ರೋಡ್. ಆ ರೋಡ್‌ನಲ್ಲಿ ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಈ ರಸ್ತೆಯಲ್ಲಿ ಸಂಚಾರ ಮಾಡುವಾಗ ಅದೆಷ್ಟೋ ಜನರು ಅಪಘಾತದಲ್ಲಿ ಆಸ್ಪತ್ರೆ ಸೇರಿದರೇ ಸುಮಾರು ಜನರು ಸ್ಮಶಾನ ಸೇರಿದ್ದಾರೆ. ಈ ರಸ್ತೆಗಾಗಿ ಹೋರಾಟ ಮಾಡಿ ಗಡುವು ನೀಡಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿಲ್ಲ. ಹಾಗಿದ್ದರೇ ಯಾವುದು ಆ ಸಾವಿನ ಹೆದ್ದಾರಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೇಲ್ಸ್...
ಹೀಗೆ ಯಾವುದೇ ಸೂಚನೆ ಫಲಕಗಳಿಲ್ಲದಿರುವ ರಸ್ತೆ. ಸರಿಯಾಗಿ ರೋಡ್ ಕ್ರಾಸ್ ಮಾಡಲು ಇಲ್ಲದೇ ಇರುವ ವ್ಯವಸ್ಥಿತ ಸರ್ವೀಸ್ ರೋಡ್ ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ. ಹೌದು.. ಈ ರಸ್ತೆಯನ್ನು ನೋಡಿದರೇ ನಿಜಕ್ಕೂ ಭಯ ಹುಟ್ಟಿಕೊಳ್ಳುತ್ತದೆ. ಯಾಕೆಂದರೆ ಹುಬ್ಬಳ್ಳಿ-ಧಾರವಾಡ ಬೈಪಾಸ್ ಬಿಟ್ಟರೇ ಇದುವೇ ಸಾವಿನ ರಹದಾರಿ ಎಂಬ ಅಪಕೀರ್ತಿಗೆ ಪಾತ್ರವಾಗಿದೆ. 2019ರಲ್ಲಿ 02 ಅಪಘಾತಗಳು ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ.
2020ರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾರೆ. ಇನ್ನೂ 2021ರಲ್ಲಿ 04 ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೇ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 2022ರಲ್ಲಿ 7 ಅಪಘಾತ ಸಂಭವಿಸಿದ್ದು, ಏಳು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಆರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಹೀಗಿದ್ದರೂ ಪ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಿ ಜೀವ ಉಳಿಸಿ ಎಂದು ಅಂಗಲಾಚಿದ್ದರೂ ಕೂಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ. ಈಗ ಮತ್ತೊಮ್ಮೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ.
ಇನ್ನೂ ಇಲ್ಲಿನ ರಸ್ತೆಯಲ್ಲಿ ಅಪಘಾತಗಳನ್ನು ನೋಡಿದರೇ ನಿಜಕ್ಕೂ ಕಣ್ಣಲ್ಲಿ ನೀರಿನ ಬದಲಿಗೆ ರಕ್ತ ಬರುವುದು ಖಂಡಿತ. ಈ ಸಾವಿನ ಹೆದ್ದಾರಿಯಲ್ಲಿ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ಅಲ್ಲದೆ ಇಲ್ಲಿ ಅಪಘಾತಕ್ಕೆ ಒಳಗಾದ ವಾಹನಗಳು ದೊಡ್ಡ ಪ್ರಮಾಣದಲ್ಲಿ ಜಖಂಗೊಂಡಿದ್ದು, ಗ್ಯಾರೇಜ್ ಸೇರದೆಯೇ ಗುಜರಿ ಸೇರಿವೆ. ಇಂತಹ ರಸ್ತೆಯಲ್ಲಿ ನೂಲ್ವಿ, ಅದರಗುಂಚಿ, ಬೆಳಗಲಿ, ಶೇರೆವಾಡ, ಕುಂದಗೋಳ ಜನರು ಓಡಾಡುತ್ತಿದ್ದು, ಕೂಡಲೇ ಪ್ಲೈಓವರ್ ನಿರ್ಮಾಣ ಮಾಡಿ ಅಪಘಾತಕ್ಕೆ ಬ್ರೇಕ್ ಹಾಕುವಂತೆ ಜನರು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಮತ್ತೊಮ್ಮೆ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಈ ಬಾರಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.
ಒಟ್ಟಿನಲ್ಲಿ ಸಾವಿನ ಹೆದ್ದಾರಿಯಾಗಿರುವ ರಸ್ತೆ ಅದೆಷ್ಟೋ ಜೀವಗಳನ್ನು ಬಲಿ ಪಡೆದಿದ್ದರೂ ಕೂಡ ಸರ್ಕಾರಕ್ಕೆ ರಸ್ತೆಯ ಕಥೆ ಅರ್ಥವಾಗಿಲ್ಲ. ಆಳುವ ಸರ್ಕಾರಕ್ಕೆ ಇಲ್ಲಿನ ಜನರ ಗೋಳು ಕೇಳದೇ ಇರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಇನ್ನಾದರೂ ಸರ್ಕಾರ ಎಚ್ಚೇತ್ತುಕೊಂಡ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
11/09/2022 08:47 am