ಧಾರವಾಡ: ನಿಯತ್ತಿಗೆ ಹೆಸರಾದದ್ದು ಶ್ವಾನ. ಹೀಗಾಗಿಯೇ ಅದನ್ನು ನಿಯತ್ತಿನ ಪ್ರಾಣಿ ಎಂದು ಕರೆಯುತ್ತಾರೆ. ಅದರಲ್ಲೂ 777 ಚಾರ್ಲಿ ಸಿನಿಮಾ ಬಂದ ಮೇಲಂತೂ ನಾಯಿಗಳ ಮೇಲೆ ಪ್ರಾಣಿಪ್ರಿಯರು ಎಲ್ಲಿಲ್ಲದ ಪ್ರೀತಿ ತೋರಿಸುತ್ತಿದ್ದಾರೆ.
ಧಾರವಾಡದಲ್ಲಿ ನಾಯಿ ಮರಿಗಳ ದತ್ತು ಪಡೆಯುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಣಿ ದಯಾ ಸಂಘ, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ, ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪಶು ಆಸ್ಪತ್ರೆ ಆವರಣದಲ್ಲಿ ನಾಯಿ ಮರಿಗಳ ದತ್ತು ಪಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಮಾರು 25 ದೇಸಿ ತಳಿಯ ನಾಯಿ ಮರಿಗಳನ್ನೇ ಇಲ್ಲಿ ತರಲಾಗಿತ್ತು. ಮುದ್ದಾದ ನಾಯಿ ಮರಿಗಳನ್ನು ಕಂಡ ಪ್ರಾಣಿಪ್ರಿಯರು ತಮಗಿಷ್ಟವಾದ ನಾಯಿ ಮರಿಗಳನ್ನು ದತ್ತು ಪಡೆದು ಖುಷಿಪಟ್ಟರು.
ಇನ್ನು ಈ ಮುನ್ನ ಆನ್‌ಲೈನ್ ಮುಖಾಂತರ ನೋಂದಣಿ ಹಾಗೂ ಖರೀದಿಗೆ ಅವಕಾಶ ಮಾಡಿ ಕೊಡಲಾಗಿತ್ತು. ಇಂದು ಸ್ಥಳಕ್ಕೆ ಬಂದ ಪ್ರಾಣಿಪ್ರಿಯರು ತಮ್ಮ ನೆಚ್ಚಿನ ನಾಯಿ ಮರಿಗಳನ್ನು ಪಡೆದುಕೊಂಡು ಹೋದರು. ಮಾಜಿ ಸಭಾಪತಿ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕೂಡ ಎರಡು ದೇಸಿ ನಾಯಿ ಮರಿಗಳನ್ನು ದತ್ತು ಪಡೆದಿದ್ದಾರೆ.
ಒಟ್ಟಿನಲ್ಲಿ ದೇಸಿ ತಳಿಯ ಬೀದಿ ನಾಯಿ ಮರಿಗಳನ್ನೂ ಸಹ ಎಲ್ಲರೂ ಪ್ರೀತಿಸಿ, ಅವುಗಳಿಗೂ ಶುದ್ಧವಾದ ಆಹಾರ, ಪ್ರೀತಿ ಕೊಡಲಿ ಎಂಬ ಉದ್ದೇಶದಿಂದ ಸಂಘಟಕರು ಈ ದತ್ತು ಕಾರ್ಯಕ್ರಮ ನಡೆಸಿದ್ದು ನಿಜಕ್ಕೂ ಶ್ಲಾಘನೀಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/08/2022 03:04 pm