ಧಾರವಾಡ : ಕಳೆದ ಶುಕ್ರವಾರ ರಾತ್ರಿ ನವೋದಯ ನಗರದಲ್ಲಿ ಒಬ್ಬ ವಯೋವೃದ್ಧೆ ಅಸಹಾಯಕ ಸ್ಥಿತಿಯಲ್ಲಿರುವ ಬಗ್ಗೆ ಸಾರ್ವಜನಿಕರು 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದರು, ಕೂಡಲೇ ಸ್ಥಳಕ್ಕೆ ಧಾವಿಸಿದ ಎಎಸ್ಐ ಚನಬಸಪ್ಪ ಸಿ.ಯು. ಹಾಗೂ ಸಿಬ್ಬಂದಿ ಆಕೆಯನ್ನು ಎರಡು ದಿನಗಳ ಕಾಲ ನವನಗರದ ವಿವೇಕಾನಂದ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಿ, ನಂತರ ಮೊಮ್ಮಗನನ್ನು ಸಂಪರ್ಕಿಸಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.
ಹೌದು. ಜೂನ್ ತಿಂಗಳ 10 ನೇ ತಾರೀಖಿನಂದು ರಾತ್ರಿ ವೇಳೆ ವೃದ್ಧೆರೊಬ್ಬರು ಅಸಹಾಯಕ ಸ್ಥಿತಿಯಲ್ಲಿರುವ ಬಗ್ಗೆ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಹೊಯ್ಸಳ 112 ವಾಹನದ ಕರ್ತವ್ಯದಲ್ಲಿದ್ದ ಎಎಸ್ಐ ಚನಬಸಪ್ಪ ಸಿ.ಯು. ಹಾಗೂ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ, ಮಾತನಾಡಲೂ ಆಗದ ಸ್ಥಿತಿಯಲ್ಲಿದ್ದ ಸುಮಾರು 80 ವರ್ಷದ ವೃದ್ಧೆಯನ್ನು ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ನವನಗರದ ವಿವೇಕಾನಂದ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಿದ್ದರು.
ನಂತರ ಎಎಸ್ಐ ರವರು ದೈನಂದಿನ ಕರ್ತವ್ಯದ ಜೊತೆಗೆ ವೃದ್ಧೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, ವೃದ್ಧೆಯನ್ನು ಧಾರವಾಡ ತಾಲೂಕ ಹಳ್ಳಿಗೇರಿ ಗ್ರಾಮದ ಸೀತಮ್ಮ ನವಲೆ ಎಂದು ಗುರುತು ಹಿಡಿದಿದ್ದಾರೆ. ಅವರ ಮೊಮ್ಮಗನಾದ ಪುಂಡಲೀಕ ನವಲೆ ಅವರನ್ನು ಸಂಪರ್ಕಿಸಿ, ಜೂನ್ 12 ರಂದು ವೃದ್ಧಾಶ್ರಮದಿಂದ ಸುರಕ್ಷಿತವಾಗಿ ತಮ್ಮ ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಅಜ್ಜಿಯನ್ನು ಸುರಕ್ಷಿತವಾಗಿ ವೃದ್ಧಾಶ್ರಮಕ್ಕೆ ಸೇರಿಸಿ ಹೆಸರು, ವಿಳಾಸವನ್ನು ಪತ್ತೆ ಮಾಡಿ ಮರಳಿ ಗ್ರಾಮಕ್ಕೆ ತಲುಪಿಸಿದ ವಿದ್ಯಾಗಿರಿ ಠಾಣೆಯ ಎಎಸ್ಐ ಚನಬಸಪ್ಪ ಸಿ.ಯು. ಹಾಗೂ ಹೊಯ್ಸಳ ಸಿಬ್ಬಂದಿಯವರಿಗೆ ಅಜ್ಜಿಯ ಸಂಬಂಧಿಕರು ಪ್ರಶಂಸೆ ವ್ಯಕ್ತಪಡಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ.
Kshetra Samachara
14/06/2022 08:49 am