ಹುಬ್ಬಳ್ಳಿ: ಆತ ಇನ್ನೂ ಅಂಬೆಗಾಲಿನಲ್ಲಿ ಆಡುತ್ತ ಮನೆಯ ಮಂದಿಗೆಲ್ಲ ಮನರಂಜನೆ ನೀಡುವ ಪುಟ್ಟ ಬಾಲಕ. ಆ ಪುಟ್ಟ ಕಂದನ ಸಾಧನೆ ನೋಡಿದರೇ ನೀವು ನಿಜಕ್ಕೂ ಬೆರಗಾಗುವುದು ಖಂಡಿತ. ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಅಷ್ಟಕ್ಕೂ ಯಾರು ಆ ಬಾಲಕ ಅಂತೀರಾ? ಈ ಸ್ಟೋರಿ ನೋಡಿ.
ಹೀಗೆ ತೊದಲು ನುಡಿಯಲ್ಲಿ ಪಟಪಟನೆ ಅಮ್ಮನ ಪ್ರಶ್ನೆಗೆ ಉತ್ತರಿಸುತ್ತಿರುವ ಬಾಲಕ. ತುಂಟತನದಲ್ಲಿಯೇ ಅರಳು ಹುರಿದಂತೆ ಉತ್ತರ ನೀಡುವ ಈ ಕಂದನ ಹೆಸರು ಶ್ರೀಯಾನ್ ಶ್ರೀನಿವಾಸ ಕೋಟಿ. ಈಗಷ್ಟೇ ಎರಡು ವರ್ಷಗಳನ್ನು ಪೂರೈಸಿರುವ ಈ ಪುಟ್ಟ ಪೋರ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಾಧನೆ ಮಾಡಿದ್ದಾನೆ. ಹೌದು.. ಹುಬ್ಬಳ್ಳಿಯ ನಿವಾಸಿಗಳಾದ ಶ್ರೀನಿವಾಸ ಕೋಟಿ ಹಾಗೂ ಸುಪ್ರೀಯಾ ಶ್ರೀನಿವಾಸ ಕೋಟಿಯವರ ಪುತ್ರ. ತನ್ನಲ್ಲಿರುವ ಅಪಾರ ಜ್ಞಾಪಕ ಶಕ್ತಿಯಿಂದ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಾಧನೆ ಮಾಡಿದ್ದಾನೆ. ಎರಡು ವರ್ಷ ಎರಡು ತಿಂಗಳು ಈ ಕಂದಮ್ಮ 12 ಪ್ರಾಣಿಗಳನ್ನು ಗುರುತಿಸುತ್ತಾನೆ. ದೇಹದ 15 ಅಂಗಗಳನ್ನು ಗುರುತಿಸುವ ಚಾಣಾಕ್ಷ. ತನ್ನ ವಯಸ್ಸಿಗೆ ಮೀರಿದ ಜ್ಞಾಪಕ ಶಕ್ತಿಯಿಂದ 8 ಬಣ್ಣಗಳು, 12 ಹಣ್ಣು, 9 ರಾಷ್ಟ್ರೀಯ ಕ್ರೀಡೆ, 5 ಶೇಫ್ಸ್, 13 ವೆಹಿಕಲ್, 11 ವೆಜಿಟೆಬಲ್ಸ್ ಗುರುತಿಸುವ ಮೂಲಕ ಒಂದು ಗಣೇಶ ಶ್ಲೋಕ ಹೇಳುತ್ತಾನೆ. ಇತನ ಅಗಾಧವಾದ ಜ್ಞಾಪಕ ಶಕ್ತಿಗೆ ಇದೇ ಏಪ್ರಿಲ್ ತಿಂಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಾಧನೆ ಮಾಡಿದ್ದಾನೆ.
ಇನ್ನೂ ಎಳೆಯ ವಯಸ್ಸಿನಲ್ಲಿಯೇ ಇಂತಹದೊಂದು ಸಾಧನೆ ಮಾಡಿರುವ ಈ ಪುಟ್ಟ ಬಾಲಕ ತೊದಲು ನುಡಿಯಲ್ಲಿಯೇ ಇಷ್ಟು ವಸ್ತುಗಳನ್ನು ಗುರುತಿಸುವ ಹಾಗೂ ಅವುಗಳ ಕಾರ್ಯವೈಖರಿ ಬಗ್ಗೆ ಹೇಳುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಮಗನ ಸಾಧನೆಗೆ ಅಪ್ಪ ಅಮ್ಮ, ಮೊಮ್ಮಗನ ಸಾಧನೆಗೆ ಅಜ್ಜಿ ಹೀಗೆ ಮನೆಯ ಮಂದಿಯೇ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರು ಎಂಬುವಂತೆ ಮಗನಲ್ಲಿರುವ ಅಗಾಧವಾದ ಶಕ್ತಿಯನ್ನು ಗುರುತಿಸಿರುವ ಹೆತ್ತವರು. ಈಗ ಮಗನ ಸಾಧನೆಗೆ ಸ್ಪೂರ್ತಿಯಾಗಿದ್ದು, ಸಾಧಕ ಬಾಲಕನ ಕೀರ್ತಿ ಜಗತ್ತಿನಾದ್ಯಂತ ಹರಡಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
-ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/06/2022 08:33 am