ಹುಬ್ಬಳ್ಳಿ : ಮೇ 29ರಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ಇಂಡಿಯಾ ಟಾಪ್ ಮಾಡೆಲ್ಸ್-2022 ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಹುಡುಗಿಯೊಬ್ಬಳು ವಿಜೇತೆಯಾಗಿ ವಾಣಿಜ್ಯ ನಗರಿಗೆ ಕೀರ್ತಿ ತಂದಿದ್ದಾಳೆ.
ಹೌದು... ಹುಬ್ಬಳ್ಳಿ ಮೂಲದ ಮಾಡೆಲಿಂಗ್ ಕ್ಷೇತ್ರದಲ್ಲಿನ ಹೊಸ ಭರವಸೆ ಎಂದೇ ಕರೆಯಲ್ಪಡುವ ಪ್ರಿಯಾಂಕಾ ಕೊಲವೇಕರ ಕಿರೀಟ ಮುಡಿಗೇರಿಸಿಕೊಂಡ ಪ್ರತಿಭೆ. ಸಂದೀಪ ಗೋಸ್ವಾಮಿ, ಸೋನಿಯಾ ಖಟಾನಾ ಆಯೋಜಿಸಿದ್ದ ಈ ಪ್ರತಿಷ್ಠಿತ ರೂಪದರ್ಶಿಗಳ ಸ್ಪರ್ಧೆಯಲ್ಲಿ ಪ್ರಿಯಾಂಕಾ ಕರ್ನಾಟಕವನ್ನು ಪ್ರತಿನಿಧಿಸಿದ್ದರಲ್ಲದೇ ಪ್ಲೈ ಡೈನ್ ಗೋವಾದ ವಿನಯಕುಮಾರ ಪ್ರಾಯೋಜಕತ್ವ ವಹಿಸಿದ್ದರು.
ನಿರ್ಣಾಯಕರಾಗಿ ಪ್ರಿನ್ಸ್ ನರುಲಾ ಸೇರಿದಂತೆ ದೇಶದ ಪ್ರತಿಷ್ಠಿತ ಸೆಲಿಬ್ರಿಟಿಗಳು ಪಾಲ್ಗೊಂಡಿದ್ದರು.
ಇನ್ನು ಪ್ರಾಣಿ ಪ್ರಿಯೆ, ಮಕ್ಕಳ ಆಪ್ತ ಸಮಾಲೋಚಕಿ, ಹವ್ಯಾಸಿ ನೃತ್ಯಗಾತಿ, ಅತ್ಯುತ್ತಮ ನಿರೂಪಕಿ ಹೀಗೆ ಬಹುಮುಖ ಪ್ರತಿಭೆಯ ಹುಬ್ಬಳ್ಳಿಯ ಮುರಾರ್ಜಿ ನಗರದ ನಿವಾಸಿಯಾದ ಎಂ.ಇ ಮತ್ತು ಎಂ.ಬಿ.ಎ ಪದವೀಧರೆಯಾಗಿರುವ ಪ್ರಿಯಾಂಕ ಸದ್ಯ ಗೋವಾದ ಪಂಚತಾರಾ ಹೊಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಿಯಾಂಕ ಮೂಲ ಕಾರವಾರವಾದರೂ ಹುಟ್ಟಿದ್ದು ಬೆಳೆದಿದ್ದು,ಕಲಿತಿದ್ದು ಎಲ್ಲ ಹುಬ್ಬಳ್ಳಿಯಲ್ಲೆ. ತಂದೆ ಗಣಪತಿ ಅಕ್ಕಸಾಲಿಗ ಮತ್ತು ತಾಯಿ ಮಂಗಲಾ ನಿವೃತ್ತ ಶಿಕ್ಷಕಿ. ಯಾರ ಸಹಾಯವಿಲ್ಲದೆ, ಫಿಟ್ನೆಸ್, ಕಾಸ್ಟ್ಯೂಮ್, ವಾಕಿಂಗ್ ಸ್ಟೈಲ್ ಎಲ್ಲವನ್ನು ಇಂಟರ್ ನೆಟ್ ನಲ್ಲಿ ನೋಡಿ ಕಲಿತು ಮಾಡೆಲಿಂಗ್ ಕ್ಷೇತ್ರದಲ್ಲಿ ಒಂದು ದಶಕದಿಂದ ತೊಡಗಿಕೊಂಡಿರುವ ಇವರು ದೇಶದಾದ್ಯಂತ ನಡೆದ ಅನೇಕ ಫ್ಯಾಷನ್ ಷೋಗಳಲ್ಲಿ ಸ್ಪರ್ಧಿಸಿ, ಹಲವು ಅವಾರ್ಡಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.
ಗೋವಾದಲ್ಲಿ ನಡೆದ 2019ರ ರಾಯಲ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಗಿ ಹೊರಹೊಮ್ಮಿದ್ದರಲ್ಲದೇ ಈಗ ರಾಷ್ಟ್ರಮಟ್ಟದಲ್ಲಿ ಮತ್ತೆ ಮಿಂಚಿದ್ದಾರೆ. 2016ರಲ್ಲಿ ಮಿಸ್ ಇಂಡಿಯಾ ಸೌಥ್ ಬ್ಯೂಟಿಫೂಲ್ ಸ್ಮೈಲ್, ಮಿಸ್ ಭಾರತ ಅರ್ಥ್ 2018, ಇಂಡಿ ರಾಯಲ್ ಪ್ರೈಡ್ ಆಫ್ ನೇಷನ್, ಎಲೈಟ್ ಮಿಸ್ ಇಂಡಿಯಾ ಅಡ್ವೆಂಚರ್ 2015 ಅವಾರ್ಡಗಳನ್ನೂ ಪಡೆದಿದ್ದಾರೆ.
Kshetra Samachara
31/05/2022 05:31 pm