ಹುಬ್ಬಳ್ಳಿ: ಅವರೆಲ್ಲರೂ ಖಾಕಿ ಬಟ್ಟೆ ಹಾಕಿಕೊಂಡು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕರ್ತವ್ಯ ನಿರ್ವಹಿಸುವ ಸೇನಾನಿಗಳು. ಅದೆಷ್ಟೋ ಕಾರ್ಯಾಚರಣೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುವ ಸೈನಿಕರು. ಹೋರಾಟದ ನಡುವೆಯೇ ಜೀವ ಕಳೆದುಕೊಂಡ ಹುತಾತ್ಮರಿಗೆ ಸಿಬ್ಬಂದಿಯೊಬ್ಬರು ವಿನೂತನ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ.
ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರ ರಕ್ಷಣೆಗೆ ಮೊಳಗುವ ಶಬ್ಧವೇ ಅಗ್ನಿಶಾಮಕ ಹಾಗೂ ತುರ್ತು ಸೇವೆಯ ಇಲಾಖೆಯ ವಾಹನದ ಸೌಂಡ್. ಹೌದು, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ತಮ್ಮ ಜೀವವನ್ನು ಲೆಕ್ಕಿಸದೆ ಖಾಕಿ ಬಟ್ಟೆ ಧರಿಸಿಕೊಂಡು ಸಾರ್ವಜನಿಕರ ಸೇವೆಯಲ್ಲಿ ಮುಂದಾಗುತ್ತಾರೆ. ಆದರೆ ಅದೆಷ್ಟೋ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವನ್ನಪ್ಪುತ್ತಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಅಮರಗೋಳದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಹುತಾತ್ಮರಿಗೆ ತಮ್ಮ ಸಂಗೀತ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯ ಅಮರಗೋಳದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಮಹಾಂತೇಶ ಲಕ್ಕುಂಡಿಯವರು ಏಪ್ರಿಲ್ 14 ರಿಂದ 20 ರವರೆಗೆ ನಡೆಯುವ ಹುತಾತ್ಮ ಅಗ್ನಿಶಾಮಕ ಸಿಬ್ಬಂದಿಗೆ ಗೌರವಾರ್ಥವಾಗಿ ನುಡಿ ನಮನ ಸಲ್ಲಿಸಿದ್ದಾರೆ. ಎಲ್ಲರಲ್ಲೂ ಒಬ್ಬ ಕಲಾವಿದ ಇದ್ದೇ ಇರುತ್ತಾನೆ ಎಂಬುವುದಕ್ಕೆ ಮಹಾಂತೇಶ ಲಕ್ಕುಂಡಿ ಅವರ ಈ ಒಂದು ಸಾಹಿತ್ಯದ ಪ್ರಯತ್ನವೇ ಸಾಕ್ಷಿಯಾಗಿದೆ.
ಪ್ರವಾಹದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಮೆಟ್ಟಿ ನಿಂತು ಉಸಿರು ಬಿಗಿ ಹಿಡಿದು ಸಾರ್ವಜನಿಕರ ಸೇವೆಗೆ ಶ್ರಮಿಸಿದ ಹಾಗೂ ಸಾರ್ವಜನಿಕರ ಸೇವೆಯಲ್ಲಿಯೇ ಹುತಾತ್ಮರಾದ ಸೇನಾನಿಗಳಿಗೆ ಈ ಹಾಡನ್ನು ಅರ್ಪಣೆ ಮಾಡಿದ್ದು, ನಿಜಕ್ಕೂ ಶ್ಲಾಘನೀಯವಾಗಿದೆ.
Kshetra Samachara
17/04/2022 04:00 pm