ಧಾರವಾಡ: ವಿದ್ಯಾಕಾಶಿ ಧಾರವಾಡದ ಪುಟಾಣಿ ಮಗುವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ. ಆ ಮಗುವಿನ ಜ್ಞಾನವನ್ನು ನೋಡಿದರೆ ಎಂತವರಿಗೂ ಅಚ್ಚರಿಯಾಗುತ್ತದೆ. ಇದೇ ಕಾರಣಕ್ಕೆ ಮಗುವಿನ ಜ್ಞಾನ ಕಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಈ ಪುಟಾಣಿಯ ಹೆಸರು ದಾಖಲಾಗಿದೆ.
ಧಾರವಾಡದ ಮಾಳಮಡ್ಡಿ ಬಡಾವಣೆಯ ವೈಭವ ರಾಜಪುರೋಹಿತ್ ಮತ್ತು ರಮ್ಯಶ್ರೀ ರಾಜಪುರೋಹಿತ್ ಎಂಬ ದಂಪತಿಯ ಮಗು ರೇವಾ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ಗಿಟ್ಟಿಸಿಕೊಂಡ ಪುಟಾಣಿ. ರೇವಾಗೆ ಈಗ ಒಂದು ವರ್ಷ ನಾಲ್ಕು ತಿಂಗಳು ಮಾತ್ರ ವಯಸ್ಸು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಈ ಮಗು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾಳೆ. ಈ ಸಣ್ಣ ವಯಸ್ಸಿನಲ್ಲಿಯೇ ರೇವಾ ಅನೇಕ ವಸ್ತುಗಳನ್ನು ಗುರುತಿಸುವ ಶಕ್ತಿ ಹೊಂದಿದ್ದಾಳೆ. ಇದನ್ನು ಗಮನಿಸಿ ರೇವಾ ರಾಜಪುರೋಹಿತ್ಳಿಗೆ 'ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ' ಸ್ಥಾನ ನೀಡಲಾಗಿದೆ. ರೇವಾ ಆರಂಭದಿಂದಲೂ ಅಚ್ಚರಿ ಎನ್ನುವಂತೆ ವರ್ತಿಸುತ್ತಿದ್ದಳು. ಪೋಷಕರಿಗೆ ಆಕೆಯ ಜ್ಞಾನ ನೋಡಿ ಅಚ್ಚರಿಯಾಯಿತು. ರೇವಾ ಎರಡು ತಿಂಗಳ ಮಗು ಇರುವಾಗಲೇ ಮಾತನಾಡೋದಕ್ಕೆ ಶುರು ಮಾಡಿದ್ದಳಂತೆ. ಇದು ಪೋಷಕರ ಅಚ್ಚರಿಗೆ ಕಾರಣವಾಗಿತ್ತು. ದಿನಗಳೆದಂತೆ ವಿವಿಧ ವಸ್ತುಗಳ ಹೆಸರು ಉಚ್ಛರಿಸಲು ಶುರು ಮಾಡಿದ ರೇವಾ, ಬಳಿಕ ಅನೇಕ ಬಗೆಯ ಹಣ್ಣು, ತರಕಾರಿಗಳನ್ನು ಗುರುತಿಸಲು ಶುರು ಮಾಡಿದಳು.
ಒಂದು ವರ್ಷದವಳಿದ್ದಾಗಲೇ ರೇವಾ ದೇವರ ಭಾವಚಿತ್ರಗಳನ್ನು ಗುರುತಿಸಬಲ್ಲ, ಸಾಕು ಪ್ರಾಣಿಗಳ ದನಿಗಳನ್ನು ಅನುಕರಿಸಬಲ್ಲ ಸಾಮರ್ಥ್ಯ ಹೊಂದಿದ್ದಳು. ಹೀಗಾಗಿ ಆಗ ಆಕೆಯ ಪಾಲಕರು ವಿವಿಧ ಹಣ್ಣು, ಕಾಯಿಪಲ್ಲೆ, ಪ್ರಾಣಿಗಳು, ಆಟಿಕೆಗಳನ್ನು ಮತ್ತು ಸುತ್ತಮುತ್ತಲಿನ ವಿವಿಧ ವಸ್ತುಗಳ ಬಗ್ಗೆ ತಿಳಿಸಿಕೊಡಲು ಪ್ರಾರಂಭಿಸಿದರು. ರೇವಾ ಒಂದು ವರ್ಷ ಎರಡು ತಿಂಗಳು ಇರುವಾಗಲೇ 30 ತರಹದ ಹಣ್ಣು, 5 ತರಹರದ ತರಕಾರಿ, 15 ಪ್ರಾಣಿಗಳು, 10 ಪ್ರಕಾರದ ವಸ್ತುಗಳು ಹಾಗೂ 30 ಬಗೆಯ ಆಟಿಕೆಗಳನ್ನು ಗುರುತಿಸಬಲ್ಲವಳಾಗಿದ್ದಳು. ಮಗುವಿನ ಶಕ್ತಿಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಪಾಲಕರು ಸಾಮಾಜಿಕ ಜಾಲತಾಣಕ್ಕೆ ಹಾಕುತ್ತಿದ್ದರು. ಆಗ ಕೆಲವರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಇದನ್ನೆಲ್ಲಾ ಕಳಿಸುವಂತೆ ಸಲಹೆ ನೀಡಿದರು. ಪಾಲಕರು ಮಗುವಿನ ಜ್ಞಾನದ ದಾಖಲೆಗಳನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಕಳಿಸಿದರು. ಮಗುವಿನ ಜ್ಞಾನವನ್ನು ಗುರುತಿಸಿ, ಇದೀಗ ಮಗುವಿನ ಹೆಸರನ್ನು 'ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ' ಸೇರ್ಪಡೆ ಮಾಡಲಾಗಿದೆ.
Kshetra Samachara
14/10/2021 01:10 pm