ಧಾರವಾಡ: ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರಕ್ಕಾಗಿ ದಿಗ್ಗಜರ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಪ್ರಶಸ್ತಿಗಾಗಿ ಕನ್ನಡ ಸಾರಸ್ವತ ಲೋಕದ ಮೂವರು ದಿಗ್ಗಜರ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸದ್ಯ ಶಿಫಾರಸ್ಸು ಮಾಡಲಾಗಿರುವ ಮೂವರು ದಿಗ್ಗಜರ ಹೆಸರಿನಲ್ಲಿ ಧಾರವಾಡದ ಚೆಂಬೆಳಕಿನ ಕವಿ ಡಾ.ಚೆನ್ನವೀರ ಕಣವಿ ಅವರ ಹೆಸರೂ ಇರುವುದು ಮತ್ತೊಂದು ಸಂತಸದ ವಿಷಯ.
ಟೈಮ್ಸ್ ಗ್ರೂಪ್ ನೀಡುವ ಭಾರತೀಯ ಜ್ಞಾನಪೀಠ ಪ್ರಶಸ್ತಿಗೆ ಕರುನಾಡ ಸಾರಸ್ವತ ಲೋಕದ ದಿಗ್ಗಜರಾದ ಎಸ್.ಎಲ್.ಭೈರಪ್ಪ, ವೀರಪ್ಪ ಮೊಯ್ಲಿ ಮತ್ತು ಡಾ.ಚೆನ್ನವೀರ ಕಣವಿ ಹೆಸರು ಶಿಫಾರಸ್ಸುಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಡಾ.ಚೆನ್ನವೀರ ಕಣವಿ ಅವರು ಧಾರವಾಡದಲ್ಲಿ ಮಾತನಾಡಿದ್ದು, ಈಗ ಕೇವಲ ಹೆಸರು ಮಾತ್ರ ಶಿಫಾರಸ್ಸು ಮಾಡಲಾಗಿದೆ. ಹಾಗೆಂದ ಮಾತ್ರಕ್ಕೆ ಪ್ರಶಸ್ತಿ ಸಿಕ್ಕಿದೆ ಎಂದೇ ಅರ್ಥವಲ್ಲ. ಯಾರ ಹೆಸರನ್ನಾದರೂ ಶಿಫಾರಸ್ಸು ಮಾಡಬಹುದು. ಪ್ರಶಸ್ತಿ ನನಗೆ ಸಿಕ್ಕರೆ ಸಂತೋಷ. ಬೇರೆಯವರಿಗೆ ಸಿಕ್ಕರೆ ಇನ್ನೂ ಸಂತೋಷ ಎಂದಿದ್ದಾರೆ.
ಈಗಾಗಲೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಒಂದು ಭಾಷೆಗೆ ಜ್ಞಾನಪೀಠ ಪ್ರಶಸ್ತಿ ನೀಡಿದ ಬಳಿಕ ಮುಂದಿನ ಮೂರು ವರ್ಷ ಆ ಭಾಷೆಯ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ. ಈಗಾಗಲೇ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದು ದಶಕ ಕಳೆದಿದೆ. ಹಾಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿರುವ ಡಾ.ಚಂದ್ರಶೇಖರ್ ಕಂಬಾರರಿಗೆ 2010ರಲ್ಲಿ ಸಮಗ್ರ ಸಾಹಿತ್ಯದ ಕೊಡುಗೆಗಾಗಿ ಜ್ಞಾನಪೀಠ ಪ್ರಶಸ್ತಿ ನೀಡಲಾಗಿತ್ತು.
Kshetra Samachara
06/10/2021 05:45 pm