ವರದಿ: ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್ ಧಾರವಾಡ.
ಧಾರವಾಡ: ಭೋಲೋ ಭಾರತ ಮಾತಾಕಿ ಜೈ ಎಂಬ ಘೋಷಣೆಗಳು.. ಇಡೀ ಗ್ರಾಮದ ತುಂಬ ಸಂಭ್ರಮದ ವಾತಾವರಣ.. ಗ್ರಾಮಸ್ಥರೆಲ್ಲರೂ ಸೇರಿ ಆ ಯೋಧನಿಗೆ ಕೊಟ್ಟ ಗೌರವ ಕಂಡು ಖುಷಿಪಟ್ಟ ಯೋಧ.. ಈ ಎಲ್ಲ ಘಟನಾವಳಿಗಳಿಗೆ ಸಾಕ್ಷಿಯಾದದ್ದು ಧಾರವಾಡ ತಾಲೂಕಿನ ಬಾಡ ಗ್ರಾಮ.
ಹೌದು! ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನನ್ನು ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡ ಬಗೆ ಇದು.
ಬಾಡ ಗ್ರಾಮದ ಬಸವರಾಜ ಭೀಮಪ್ಪ ಸುಣಗಾರ ಎಂಬ ಯೋಧ 17 ವರ್ಷ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರು ಸಕಲ ವಾಧ್ಯಮೇಳಗಳೊಂದಿಗೆ ಮೆರವಣಿಗೆ ಮಾಡಿ ಅವರನ್ನು ಬರಮಾಡಿಕೊಂಡಿದ್ದಾರೆ.
ಬಾಡ ಕ್ರಾಸ್‌ನಿಂದ ಗ್ರಾಮದವರೆಗೆ ಮೆರವಣಿಗೆ ನಡೆಸಿದ ಗ್ರಾಮಸ್ಥರು, ಯೋಧನಿಗೆ ಹೂವು ಹಾಕಿ ಆರತಿ ಬೆಳಗಿ ಸ್ವಾಗತ ಮಾಡಿಕೊಂಡಿದ್ದಾರೆ. ಯೋಧ ಬಸವರಾಜ 2004 ಜುಲೈ 8 ರಂದು ಸೇನೆಗೆ ಆಯ್ಕೆಗೊಂಡಿದ್ದರು. ತಮಿಳುನಾಡಿನಲ್ಲಿ ತರಬೇತಿ ಪಡೆದುಕೊಂಡು, ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಸಿಕ್ಕಿಂ, ಉತ್ತರಾಖಂಡ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಮುಖವಾಗಿ ಡೊಕ್ಲಾಂ ವಿವಾದದ ಸಂದರ್ಭದಲ್ಲಿ ಸಹ ಸೇವೆ ಸಲ್ಲಿಸಿದ ಹಿರಿಮೆ ಇವರದ್ದಾಗಿದೆ.
ಕರ್ತವ್ಯದ ಸಂದರ್ಭದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಗ್ರಾಮದ ಯುವಕರಿಗೆ ಮಾದರಿಯಾಗುತ್ತೇನೆ ಎಂದು ಯೋಧ ಬಸವರಾಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏನೇ ಆಗಲಿ ತಮ್ಮ ಹಳ್ಳಿ, ತಂದೆ, ತಾಯಿ, ಒಡಹುಟ್ಟಿದವರು, ಹೆಂಡತಿ, ಮಕ್ಕಳನ್ನು ಬಿಟ್ಟು 17 ವರ್ಷಗಳ ಕಾಲ ಭಾರತಾಂಬೆಯ ಸೇವೆಗೈದು ಬಂದಿರುವ ಯೋಧನ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ.
Kshetra Samachara
05/08/2021 09:46 pm