ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಭಾರತಾಂಬೆಯ ಹೆಮ್ಮೆಯ ಕುವರನಿಗೆ ಹೃದಯಸ್ಪರ್ಶಿ ಸ್ವಾಗತ

ಧಾರವಾಡ: ಗಡಿಯ ಕಾಯುವಾ ಸಿಡಿಲ ಮರಿಗಳೆ.. ತ್ಯಾಗ ಬಲಿದಾನ ಮುಕುಟ ಮಣಿಗಳೇ.. ಯಾವ ಹಳ್ಳಿಯೋ ಯಾರ ಬಳ್ಳಿಯೋ.. ಎಂಬ ಈ ಹಾಡು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ. ಒಂದು ಕ್ಷಣ ನಾವೂ ಸೈನಿಕರಾಗಬೇಕಿತ್ತು ಎಂದೆನಿಸುತ್ತದೆ. ಆದರೆ, ಆ ಅವಕಾಶ ಸಿಗುವುದು ಕೆಲವರಿಗೆ ಮಾತ್ರ.

ಅದೇ ರೀತಿ ಎರಡು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಆ ವ್ಯಕ್ತಿ ತನ್ನೂರಿನಿಂದ ಹೋಗುವಾಗ ನೋವಿನಿಂದ ಹೋಗಿದ್ದ. ಆದರೆ ಇಂದು ಆತ ಸೇವೆ ಮುಗಿಸಿ ಮರಳಿ ತನ್ನೂರಿಗೆ ಬಂದಾಗ ಆತನಿಗೆ ದೊಡ್ಡ ಸ್ವಾಗತವೇ ಕಾದಿತ್ತು. ಇದೆಲ್ಲಾ ನಡೆದಿದ್ದು ಧಾರವಾಡ ತಾಲೂಕಿನ ತಡಕೋಡ ಗ್ರಾಮಕ್ಕೆ ಹೊಂದಿಕೊಂಡಿರುವ ಖಾನಾಪುರ ಗ್ರಾಮದಲ್ಲಿ.

ಈ ಗ್ರಾಮದ ಯುವಕ ಸಿದ್ದಪ್ಪ ಗುಂಡಗೋವಿ 20 ವರ್ಷಗಳ ಹಿಂದೆ ಭಾರತೀಯ ಸೇನೆ ಸೇರಿದ್ದರು. ಗ್ರಾಮದ ಶಿವರುದ್ರಪ್ಪ-ಗಂಗವ್ವ ದಂಪತಿಯ ನಾಲ್ಕನೇ ಮಗನಾಗಿರುವ ಸಿದ್ದಪ್ಪ, ಪಿಯುಸಿ ಮುಗಿಯುತ್ತಿದ್ದಂತೆಯೇ ಭಾರತೀಯ ಸೇನೆಯ ಮದ್ರಾಸ್ ಗ್ರುಪ್ ನ 13 ನೇ ರೆಜಿಮೆಂಟ್ ಗೆ ಭರ್ತಿಯಾದರು. ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಸಿದ್ದಪ್ಪನಿಗೆ ಸೇನೆ ಸೇರೋದು ಅನಿವಾರ್ಯವಾಗಿತ್ತು. ಅದರೊಂದಿಗೆ ದೇಶವನ್ನು ರಕ್ಷಿಸೋ ಕೆಲಸವನ್ನು ಮಾಡಬೇಕು ಅನ್ನೋದು ಕೂಡ ಕನಸಾಗಿತ್ತು. ಹೀಗಾಗಿ ಸೇನೆ ಸೇರಿದ ಸಿದ್ದಪ್ಪ, ಸುಮಾರು 20 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತರಾಗಿ ತಮ್ಮೂರಿಗೆ ಮರಳಿದ್ದಾರೆ. ನಿವೃತ್ತ ಯೋಧನಿಗೆ ಗ್ರಾಮಸ್ಥರು ವಿಭಿನ್ನವಾಗಿ ಸ್ವಾಗತ ಕೋರಿದರು. ಶಾಲಾ ಮಕ್ಕಳು ಅವರಿಗೆ ಅದ್ಧೂರಿ ಸ್ವಾಗತ ಕೋರಿದರೆ, ಗ್ರಾಮದ ಮಹಿಳೆಯರು ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು.  

ಬಳಿಕ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸಿದ್ದಪ್ಪ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟರು. ಇನ್ನು ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಶಾಲೆಗೆ ಕರೆದು ತಂದು, ಸನ್ಮಾನ ಮಾಡಿ ಖುಷಿ ಪಟ್ಟರು. ಇನ್ನು ಇದೇ ವೇಳೆ ಗ್ರಾಮದ ಮತ್ತೊಬ್ಬ ಯುವಕ ಇದೇ ಸಿದ್ದಪ್ಪನೊಂದಿಗೆ ಅವತ್ತೇ ಸೇನೆ ಸೇರಿದ್ದರು. ಆತನ ಹೆಸರು ಬಸವರಾಜ. ಆದರೆ ಸೇನೆಗೆ ಸೇರಿ ಮೂರು ವರ್ಷದಲ್ಲಿ ಆತ ವೀರ ಮರಣವನ್ನಪ್ಪಿದ್ದರು. ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದಿದ್ದ ಕಾಳಗದಲ್ಲಿ ಆತ ವೀರಮರಣವನ್ನಪ್ಪಿದ್ದ. ಆತನ ನೆನಪಿಗೋಸ್ಕರ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸವರಾಜನ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಇಂಥ ಖುಷಿಯ ವೇಳೆಯಲ್ಲಿಯೇ ಆತನನ್ನು ನೆನಪಿಸಿಕೊಂಡ ಸಿದ್ದಪ್ಪ, ಒಂದು ವೇಳೆ ಅವರು ಬದುಕಿದ್ದಿದ್ದರೆ ಆತನೂ ತನ್ನೊಂದಿಗೆ ನಿವೃತ್ತರಾಗುತ್ತಿದ್ದರು ಅಂತಾ ನೋವು ತೋಡಿಕೊಂಡರು.

39 ವರ್ಷದ ಸಿದ್ದಪ್ಪ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿಯೇ ಇದ್ದು ಯುವಕರಿಗೋಸ್ಕರ ಏನಾದರೂ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಅದರಲ್ಲೂ ಸೇನೆಗೆ ಭರ್ತಿಯಾಗೋ ಕನಸು ಹೊತ್ತಿರುವ ಯುವಕರಿಗೆ ತರಬೇತಿ ನೀಡುವ ಕನಸನ್ನು ಹೊಂದಿದ್ದಾರೆ. ಒಟ್ಟಿನಲ್ಲಿ ಎರಡು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಊರಿಗೆ ಮರಳಿ ಬಂದಾಗ ಅದ್ಧೂರಿ ಸ್ವಾಗತ ಸಿಕ್ಕಿದ್ದು ನಿವೃತ್ತ ಯೋಧನಿಗೆ ಖುಷಿ ತಂದಿದ್ದಂತೂ ಸತ್ಯ. 

Edited By : Nagesh Gaonkar
Kshetra Samachara

Kshetra Samachara

25/02/2021 08:20 pm

Cinque Terre

54.11 K

Cinque Terre

19

ಸಂಬಂಧಿತ ಸುದ್ದಿ