ಧಾರವಾಡ: ಇಲ್ಲೊಬ್ಬ ವ್ಯಕ್ತಿ ಬೀದರ್ ನಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಇವರು ಪಾದಯಾತ್ರೆ ಮಾಡುತ್ತಿರುವುದಾದರೂ ಏಕೆ ಎನ್ನುವುದು ನಿಜಕ್ಕೂ ಕುತೂಹಲಕಾರಿ ವಿಷಯ.
ಅನೇಕರು ಯಾವುದೋ ಒಂದು ವಿಷಯ ಅಥವಾ ಬೇಡಿಕೆಯನ್ನಿಟ್ಟುಕೊಂಡು ಪಾದಯಾತ್ರೆ ಮಾಡುವುದು ಸಹಜ. ಆದರೆ, ಬೆಂಗಳೂರು ಮೂಲದ ವಿವೇಕಾನಂದ ಎಚ್.ಕೆ. ಎನ್ನುವವರು ಜ್ಞಾನ ಭಿಕ್ಷಾ ಪಾದಯಾತ್ರೆ ಎಂಬ ಘೋಷವಾಕ್ಯದಡಿ ಮಾನವೀಯ ಮೌಲ್ಯಗಳ ಉಳಿವಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.
ಯಾರು ಯಾರು ಯಾವ ಕೆಲಸ ಮಾಡುತ್ತಾರೋ ಆ ಕೆಲಸವನ್ನು ಮಾತ್ರ ಮಾಡಬೇಕು. ಅದನ್ನು ಬಿಟ್ಟು ಬೇರೆ ಕೆಲಸ ಮಾಡಬಾರದು. ಯಾವುದನ್ನು ಸಮಾಜಕ್ಕೆ ತಿಳಿಸಬೇಕೋ ಅದನ್ನು ತಿಳಿಸುವ ಕೆಲಸ ಮಾಡಬೇಕು. ಮಾನವೀಯ ಮೌಲ್ಯಗಳನ್ನು ಗೌರವಿಸಿ ಅವುಗಳನ್ನು ಉಳಿಸಬೇಕಾಗಿದೆ. ಇದೇ ಪಾದಯಾತ್ರೆಯ ಉದ್ದೇಶವಾಗಿದೆ ಎನ್ನುವುದು ವಿವೇಕಾನಂದ ಅವರ ಅಭಿಪ್ರಾಯ.
ನ.1 ರಿಂದ ಬೀದರ್ ನಿಂದ ಪಾದಯಾತ್ರೆ ಆರಂಭಿಸಿರುವ ಇವರು, 111 ದಿನಗಳಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ಪ್ರತಿನಿತ್ಯ 35 ರಿಂದ 40 ಕಿಲೋ ಮೀಟರ್ ನಡೆಯುವ ಇವರು, ಅಲ್ಲಲ್ಲಿ ವಸತಿ ಮಾಡಿ ಮತ್ತೆ ಪಾದಯಾತ್ರೆ ನಡೆಸುತ್ತಾರೆ.
ಶುಕ್ರವಾರ ಧಾರವಾಡದಿಂದ ಮತ್ತೆ ಪಾದಯಾತ್ರೆ ಮುಂದುವರಿಸಿದ ವಿವೇಕಾನಂದ, ಮುಂದೆ ಚಾಮರಾಜನಗರದವರೆಗೂ ಹೋಗಲಿದ್ದಾರಂತೆ.
Kshetra Samachara
19/02/2021 04:46 pm