ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರುದ್ರಭೂಮಿಗಾಗಿ ಡಿಸಿ ಕಚೇರಿಗೆ ತಮಟೆ ತಂದ ಜನ

ಧಾರವಾಡ: ಅನೇಕ ವರ್ಷಗಳಿಂದ ಆ ಗ್ರಾಮದ ಜನ ಅದೇ ಜಾಗದಲ್ಲಿ ಶವ ಸಂಸ್ಕಾರ ಮಾಡ್ತಾ ಇದ್ರಂತೆ. ಆದ್ರೆ ಆ ಜಾಗ ಇದೀಗ ಪರಬಾರೆಯಾಗುತ್ತಿರೋದ್ರಿಂದ ನಮ್ಮೂರಲ್ಲಿ ಯಾರಾದ್ರು ತೀರಿ ಹೋದ್ರೆ ನಾವೆಲ್ಲಿ ಶವ ಸಂಸ್ಕಾರ ಮಾಡೋದು ಎಂದು ಆ ಗ್ರಾಮದ ಜನ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕೈ ಹೊತ್ತು ಸುಮ್ಮನೆ ಕುಳಿತುಕೊಳ್ಳದ ಗ್ರಾಮದ ಜನ ತಮಟೆ ಸಮೇತ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬಂದು ಸ್ಮಶಾನಕ್ಕೆ ಜಾಗ ನೀಡಿ ಎಂದು ಆಗ್ರಹಿಸ್ತಾ ಇದ್ದಾರೆ.

ಜಿಲ್ಲಾ ಕೇಂದ್ರ ಧಾರವಾಡದಿಂದ ಸುಮಾರು ಏಳೆಂಟು ಕಿಲೋ ಮೀಟರ್ ದೂರದಲ್ಲಿರುವ ಲಕಮಾಪುರ ಎಂಬ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದವರಿಗೆಂದೇ ಸ್ಮಶಾನಕ್ಕಾಗಿ ಜಾಗ ನೀಡಲಾಗಿತ್ತು.

ಅನೇಕ ವರ್ಷಗಳಿಂದ ಆ ಜಾಗದಲ್ಲೇ ಶವ ಸಂಸ್ಕಾರ ಕೂಡ ನಡೀತಾ ಇತ್ತಂತೆ. ಆದ್ರೆ, ಈಗ ಇದ್ದಕ್ಕಿದ್ದಂತೆ ಆ ಜಾಗವನ್ನು ಬೇರೆಯವರು ಪರಬಾರೆ ಮಾಡಿಕೊಳ್ಳುತ್ತಿದ್ದು, ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಶವ ಸಂಸ್ಕಾರಕ್ಕೆ ಜಾಗ ಇಲ್ಲದಂತಾಗಿದ್ದು, ರಸ್ತೆ ಪಕ್ಕವೇ ಜಾಗ ಹುಡಕಬೇಕಾದ ಅನಿವಾರ್ಯತೆ ಎದುರಾಗಿದೆ.

ಲಕಮಾಪುರ ಗ್ರಾಮದ ಸರ್ವೆ ನಂಬರ್ 5 ರಲ್ಲಿ ಒಂದು ಎಕರೆ ಜಾಗವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗಾಗಿ ಸ್ಮಶಾನಕ್ಕಾಗಿ ಆ ಹೊಲದ ಮಾಲೀಕರು ದಾನವಾಗಿ ನೀಡಿದ್ರಂತೆ.

ಇದೀಗ ವಿಜಯಲಕ್ಷ್ಮೀ ತಾನಾಜಿರಾವ್ ಪಾಟೀಲ ಎಂಬುವವರು ಆ ಜಾಗವನ್ನು ಪರಬಾರೆ ಮಾಡಿಕೊಳ್ಳುತ್ತಿದ್ದು, ಯಾವುದೇ ಕಾರಣಕ್ಕೂ ಆ ಜಾಗವನ್ನು ಅವರಿಗೆ ಬಿಟ್ಟು ಕೊಡಬಾರದು ಎಂದು ಧಾರವಾಡದ ಡಿಸಿ ಕಚೇರಿ ಎದುರು ಲಕಮಾಪುರ ಗ್ರಾಮದ ಜನ ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ 1994 ರಿಂದಲೂ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರಂತೆ. ಆದರೆ, ಅಧಿಕಾರಿಗಳು ಆ ಗ್ರಾಮಕ್ಕೆ ಕಾಯಂ ಸ್ಮಶಾನಕ್ಕಾಗಿ ಭೂಮಿಯನ್ನು ನಿಗದಿಪಡಿಸಿಲ್ವಂತೆ.

ರುದ್ರಭೂಮಿಗಾಗಿ ಸಾರ್ವಜನಿಕರು ಹೋರಾಟಕ್ಕಿಳಿದಿದ್ದು, ಗ್ರಾಮಸ್ಥರ ಈ ಬೇಡಿಕೆಯನ್ನು ಈಡೇರಿಸಲು ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಅದೆಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By : Manjunath H D
Kshetra Samachara

Kshetra Samachara

12/02/2021 09:22 pm

Cinque Terre

35.41 K

Cinque Terre

0

ಸಂಬಂಧಿತ ಸುದ್ದಿ