ಧಾರವಾಡ: ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಆಸ್ತಿ ಅಂದ್ರೆ ಅದು ತಂದೆ, ತಾಯಿ ಮಾತ್ರ. ಇವರ ಮಧ್ಯೆ ಆಸ್ತಿ, ಅಂತಸ್ತು ತೃಣ ಸಮಾನ ಎನ್ನುತ್ತಾರೆ. ಆದ್ರೆ ಇಲ್ಲೊಬ್ಬ ಮಗಳು ತಾಯಿ ಬೇಡ ಆಕೆಯ ಆಸ್ತಿ ಮಾತ್ರ ಬೇಕು ಎಂದು ರಂಪಾಟ ಮಾಡಿಕೊಂಡು ಸುದ್ದಿಯಾಗಿದ್ದಾಳೆ.
ಧಾರವಾಡದ ಎನ್ ಟಿಟಿಎಫ್ ಬಳಿಯ ರಾಮನಗರದಲ್ಲಿ ಈ ಘಟನೆ ನಡೆದಿದೆ. ರಾಮನಗರದಲ್ಲಿ ವಸುಂಧರಾ ಪಾಟೀಲ (75) ಎಂಬ ವೃದ್ಧೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಇವರು ನಿವೃತ್ತ ಶಿಕ್ಷಕಿ. ಕಳೆದ ಎಂಟು ದಿನಗಳ ಹಿಂದೆ ವಸುಂಧರಾ ಅವರ ಹಿರಿಯ ಮಗಳಾದ ಮಧುರಾ ಮನೆಗೆ ಬಂದು ತನ್ನ ತಾಯಿ ಹಾಗೂ ತನ್ನ ತಂಗಿ ಮೃದುಲಾ ಅವರಿಗೆ ತೊಂದರೆ ಕೊಟ್ಟಿದ್ದಲ್ಲದೇ ತಾಯಿಯ ಆಸ್ತಿ ನೀಡುವಂತೆ ರಂಪಾಟ ಮಾಡಿದ್ದಾಳೆ.
ಅಲ್ಲದೇ ನಿನ್ನೆ ರಾತ್ರಿ ತನ್ನ ತಂಗಿ ಮೃದುಲಾ ಅವರನ್ನು ಮನೆಯಿಂದ ಹೊರಗಡೆ ಹಾಕಿದ್ದಾಳೆ. ಇದರಿಂದ ಮನನೊಂದ ಮೃದುಲಾ ಸಾಧನಾ ಸಂಸ್ಥೆ ಮುಖ್ಯಸ್ಥೆ ಡಾ.ಇಸಾಬೆಲ್ಲಾ ಝೇವಿಯರ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಧಾರವಾಡದ ಶಹರ ಠಾಣೆಗೆ ದೂರು ಸಹ ನೀಡಿದ್ದರು.
ಇಂದು ವಸುಂಧರಾ ಅವರ ಮನೆಗೆ ಭೇಟಿ ನೀಡಿದ ಸಾಧನಾ ಸಂಸ್ಥೆ ಮುಖ್ಯಸ್ಥೆ ಡಾ.ಇಸಾಬೆಲ್ಲಾ ಹಾಗೂ ಶಹರ ಠಾಣೆ ಪೊಲೀಸರು ಈ ಸಹೋದರಿಯರ ಆಸ್ತಿ ಜಗಳವನ್ನು ಬಗೆಹರಿಸಲು ಪ್ರಯತ್ನಿಸಿದರು.
ಒಂದು ಹಂತದಲ್ಲಿ ಪೊಲೀಸರ ಮುಂದೆಯೇ ಮಧುರಾ ರಂಪಾಟ ಮಾಡಿದ್ದಾಳೆ. ನಂತರ ಪೊಲೀಸರು, ಈ ಮನೆಯಲ್ಲಿ ಅಜ್ಜಿ ಹಾಗೂ ನಿಮ್ಮ ಸಹೋದರಿ ಮೃದುಲಾ ಅವರೇ ಇರಲಿ ನೀವು ನಿಮ್ಮ ಊರಿಗೆ ಹೋಗಿ.
ಆಸ್ತಿ ವಿಷಯ ಏನಾದರೂ ಇದ್ದರೆ ನ್ಯಾಯಾಲಯಕ್ಕೆ ಹೋಗಿ ಬಗೆಹರಿಸಿಕೊಳ್ಳಿ ಎಂದು ಮಧುರಾ ಅವರನ್ನು ಮರಳಿ ಬೆಂಗಳೂರಿಗೆ ಕಳುಹಿಸಿದ್ದಾರೆ. ಇವರ ಜಗಳದ ಮಧ್ಯೆ ಹಾಸಿಗೆ ಹಿಡಿದ ಅವರ ತಾಯಿ ವಸುಂಧರಾ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ವೇದನೆ ಅನುಭವಿಸಿದರು.
Kshetra Samachara
02/02/2021 10:34 pm