ಧಾರವಾಡ: ಖಾಲಿ ಗಾಡಾ ಓಡಿಸುವ ಶರತ್ತಿನ ಒಂಟಿ ಹೋರಿಯೊಂದು ಬರೊಬ್ಬರಿ ನಾಲ್ಕೂವರೆ ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಕಡಿಮೆ ವಯಸ್ಸಿನ ಹೋರಿಯೊಂದಕ್ಕೆ ಇಷ್ಟೊಂದು ಮೌಲ್ಯ ಸಿಕ್ಕಿರುವುದು ಇದೇ ಮೊದಲು ಎಂಬುದು ವಿಶೇಷವಾಗಿದೆ.
ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಬಸಪ್ಪ ಕೋಣನ್ನವರ ಎಂಬುವವರಿಗೆ ಸೇರಿದ ಹೋರಿಯೇ ನಾಲ್ಕೂವರೆ ಲಕ್ಷ ರೂಪಾಯಿ ಬೇಡಿಕೆ ಪಡೆದುಕೊಂಡು ಮಾರಾಟವಾಗಿದೆ. ಬೆಳಗಾವಿ ಜಿಲ್ಲೆಯ ಬೆಳಗುಂದಿಯ ಕೃಷ್ಣಾ ಪಾಟೀಲ ಎಂಬುವವರು ಈ ಹೋರಿಯನ್ನು ಹುಡುಕಿಕೊಂಡು ಬಂದು ಅದಕ್ಕೆ ಭಾರಿ ಬೆಲೆ ಕೊಟ್ಟು ಖರೀದಿಸಿದ್ದಾರೆ.
ಬಸಪ್ಪನವರ ತಂದೆ ಭೀಮಪ್ಪ ಕಳೆದ ನಾಲ್ಕು ವರ್ಷಗಳ ಹಿಂದೆ ರಾಣೆಬೆನ್ನೂರ ತಾಲೂಕು ದೇವರಗುಡ್ಡದಲ್ಲಿ 30 ಸಾವಿರ ರೂಪಾಯಿಗೆ ಜೋಡಿ ಹೋರಿ ಖರೀದಿಸಿದ್ದರು. ಅದರ ಪೈಕಿಯೇ ಇದೊಂದು ಬಲಿಷ್ಠವಾಗಿ ಬೆಳೆದಿದೆ. ಖಾಲಿ ಗಾಡಾ ಓಡಿಸವ ಸ್ಪರ್ಧೆ ಇದ್ರೆ ಅಲ್ಲಿ ಇದೇ ಮೊದಲ ಬಹುಮಾನ ಪಡೆದುಕೊಳ್ಳುತ್ತಿತ್ತಂತೆ.
ನಿತ್ಯ ಮೂರು ಹೊತ್ತು ಹುರಳಿ ನುಚ್ಚು, 2 ಲೀಟರ್ ಹಾಲು, ಎರಡು ದಿನಕ್ಕೊಮ್ಮೆ ಮೊಟ್ಟೆ ಕೊಟ್ಟು ಈ ಹೋರಿಯನ್ನು ಇವರು ಶರತ್ತಿನ ಹೋರಿಯನ್ನಾಗಿ ಬೆಳೆಸಿದ್ದಾರೆ.
ಎರಡು ತಿಂಗಳಲ್ಲಿ ನಡೆದ 8 ಚಕ್ಕಡಿ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ, 4 ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಪಡೆದಿದೆ. ಇಲ್ಲಿಯವರೆಗೆ ಒಟ್ಟು 2 ಬೈಕ್, ಒಂದೂವರೆ ಲಕ್ಷ ರೂಪಾಯಿಗೆ ಹೆಚ್ಚು ಬಹುಮಾನದ ಹಣವನ್ನು ಈ ಹೋರಿ ತಂದು ಕೊಟ್ಟಿದೆ.
Kshetra Samachara
30/01/2021 06:27 pm