ಧಾರವಾಡ: ಕೊರೊನಾ ಹಾವಳಿಯಿಂದ ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ನಗರದ ಪ್ರದೇಶದ ಮಕ್ಕಳು ಆನ್ ಲೈನ್ ಪಾಠ ಹಾಗೂ ಮತ್ತಿತರರ ಚಟುವಟಿಕೆಗಳಿಂದ ಹೇಗೋ ಕಾಲ ಕಳೆಯುತ್ತಿದ್ದರೆ,
ಹಳ್ಳಿಯಲ್ಲಿರೋ ಸರ್ಕಾರಿ ಶಾಲೆಗಳ ಮಕ್ಕಳಿಗಂತೂ ಆಟ ಬಿಟ್ರೆ ಓದು ಅಂತಾ ಬಂದಾಗ ಮಾತ್ರ ಅವರು ತಮ್ಮ ಗ್ರಾಮ ಪಂಚಾಯ್ತಿಯಲ್ಲಿರೋ ಗ್ರಂಥಾಲಯಗಳನ್ನೇ ಆಶ್ರಯಿಸಬೇಕು.
ಆದ್ರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ಇರೋದೇ ಒಂದಷ್ಟು ಪುಸ್ತಕಗಳು ಮಾತ್ರ.
ಇದರಿಂದ ಅದೆಷ್ಟೋ ಮಕ್ಕಳಿಗೆ ಓದಬೇಕು ಅನ್ನೋ ಆಸೆ ಇದ್ರೂ ಸಿಗಬೇಕಾದ ಪುಸ್ತಕಗಳೇ ಲಭ್ಯವಿಲ್ಲ. ಇದನ್ನು ಅರಿತುಕೊಂಡ
ಧಾರವಾಡದ ಬಿಇಓ ಒಬ್ಬರು ಈಗ 39 ಸಾವಿರ ಪುಸ್ತಕಗಳನ್ನು ಸಂಗ್ರಹಿಸುವ ಹುಚ್ಚಿಗೆ ಬಿದ್ದು, ಅಭಿಯಾನ ಆರಂಭಿಸಿದ್ದಾರೆ. ಅದಕ್ಕಾಗಿ ಇವರು ಜೋಳಿಗೆಯನ್ನು ಸಹ ಹಾಕಿದ್ದಾರೆ.
ರಜಾ ದಿನದಲ್ಲೂ ಮನೆಯಲ್ಲಿರೋದನ್ನು ಬಿಟ್ಟು ಹೀಗೆ ಕೈಯಲ್ಲಿ ಕೈಯಲ್ಲಿ ಜೋಳಿಗೆ ಹಿಡಿದು ಮನೆ ಮನೆ ಸುತ್ತಿ ಪುಸ್ತಕ ಸಂಗ್ರಹಿಸುತ್ತಿರುವ ಇವರ ಹೆಸರು ಉಮೇಶ ಬೊಮ್ಮಕ್ಕನವರ. ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ.
ಇವರು ಹಳ್ಳಿಯೊಂದರ ವಿದ್ಯಾಗಮ ಕೇಂದ್ರಕ್ಕೆ ಭೇಟಿ ನೀಡಿದ್ದಾಗ ಅಲ್ಲಿರೋ ಮಕ್ಕಳು, ಲಾಕ್ ಡೌನ್ ಅವಧಿಯಲ್ಲಿ ತಮ್ಮೂರಿನ ಗ್ರಾಮ ಪಂಚಾಯ್ತಿ ಗ್ರಂಥಾಲಯದಲ್ಲಿನ ಪುಸ್ತಕಗಳನ್ನೆಲ್ಲ ಓದಿ ಮುಗಿಸಿದ್ದು,
ಅಲ್ಲಿ ಓದೋಕೆ ಈಗ ಬೇರೆ ಪುಸ್ತಕಗಳೇ ಇಲ್ಲ ಅಂತಾ ಹೇಳಿದ್ರಂತೆ. ಇದನ್ನೇ ಗಂಭೀರವಾಗಿ ಪರಿಗಣಿಸಿದ ಬಿಇಓ, ಧಾರವಾಡ ತಾಲೂಕಿನ 39 ಗ್ರಾಮ ಪಂಚಾಯ್ತಿಗಳಲ್ಲಿ ಗ್ರಂಥಾಲಯಗಳಿವೆ ಅನ್ನೋ ಮಾಹಿತಿ ಆಧರಿಸಿ,
ಪ್ರತಿ ಗ್ರಂಥಾಲಯಕ್ಕೂ ಒಂದು ಸಾವಿರ ಪುಸ್ತಕ ಕೊಡಬೇಕು ಅನ್ನೋ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಎರಡನೇ ಹಾಗೂ ನಾಲ್ಕನೇ ಶನಿವಾರದ ರಜೆಯ ಜೊತೆಗೆ
ಪ್ರತಿ ಭಾನುವಾರವೂ ಸಹ ರಜಾ ದಿನದಂದು ತಮ್ಮ ಕಚೇರಿಯ ಸಿಬ್ಬಂದಿಯನ್ನು ಕಟ್ಟಿಕೊಂಡು ಧಾರವಾಡ ನಗರದ ವಿವಿಧ ಬೀದಿಗಳನ್ನು ಸುತ್ತಿ ಹೀಗೆ ಮನೆಯಲ್ಲಿರೋ ಓದಿ ಬಿಟ್ಟ ಹಳೇ ಪುಸ್ತಕಗಳನ್ನು ಸಂಗ್ರಹಿಸುತ್ತಿದ್ದಾರೆ.
ಇನ್ನು 39 ಗ್ರಂಥಾಲಯಗಳ ಪೈಕಿ ಒಂದೊಂದಕ್ಕೂ ಒಂದೊಂದು ಸಾವಿರ ಪುಸ್ತಕ ನೀಡುವ ಗುರಿ ಇವರದ್ದಾಗಿದ್ದು, ಒಟ್ಟು 39 ಸಾವಿರ ಪುಸ್ತಕಗಳು ಬೇಕಾಗಿವೆ.
ಈಗಾಗಲೇ ಎರಡ್ಮೂರು ರಜೆಗಳಲ್ಲಿಯೇ 7 ಸಾವಿರದಷ್ಟು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಮೊದಲೇ ಹೇಳಿ ಕೇಳಿ ಧಾರವಾಡ ಸಾಹಿತಿಗಳ, ಸಾಹಿತ್ಯಾಸಕ್ತರ ಊರು.
ಹೀಗಾಗಿ ಅನೇಕರ ಬಳಿ ಓದಿಟ್ಟ ಪುಸ್ತಕಗಳು ಹಾಗೆಯೇ ಉಳಿದುಕೊಂಡು ಬಿಟ್ಟಿವೆ. ಅವುಗಳನ್ನು ರದ್ದಿಗೆ ಹಾಕುವ ಬದಲಿಗೆ ನಮಗೆ ನೀಡಿ ನಾವು ಹಳ್ಳಿ ಮಕ್ಕಳಿಗೆ ಅವುಗಳನ್ನು ಓದಲು ಕೊಡ್ತಿವಿ ಅಂತಾ ಪುಸ್ತಕಗಳಿರುವವರ ಮನೆ ಮನೆಗೆ ಹೋಗಿ ಹೇಳುತ್ತಿದ್ದಾರೆ.
ಈ ಕಾರ್ಯಕ್ಕೆ ಈಗ ಅನೇಕ ಸಂಘ, ಸಂಸ್ಥೆಗಳು ಹಾಗೂ ಶಿಕ್ಷಕರು ಸಹ ಕೈ ಜೋಡಿಸಿದ್ದು, ತಮ್ಮಲ್ಲಿರೋ ನೂರಾರು ಪುಸ್ತಕಗಳನ್ನು ನೀಡುತ್ತಿದ್ದಾರೆ.
ಒಟ್ಟಾರೆಯಾಗಿ ಹಳ್ಳಿ ಮಕ್ಕಳು ತಮ್ಮ ಗ್ರಾಮದಲ್ಲಿರೋ ಗ್ರಂಥಾಲಗಳಿಂದಲೇ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ತಮ್ಮ ಜ್ಞಾನ ಬೆಳೆಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ
ಧಾರವಾಡ ಬಿಇಓ ಮತ್ತು ಅವರ ಕಚೇರಿ ಸಿಬ್ಬಂದಿ 39 ಸಾವಿರ ಪುಸ್ತಕ ಸಂಗ್ರಹ ಗುರಿ ಹೊಂದಿರುವ ಕಾರ್ಯ ಪ್ರಶಂಸನೀಯವಾಗಿದ್ದು, ಧಾರವಾಡದ ಸಾಹಿತ್ಯ ಮನಸ್ಸುಗಳಿಂದ ಇದಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದೆ.
Kshetra Samachara
29/12/2020 11:47 am