ಹುಬ್ಬಳ್ಳಿ: ಕೇಂದ್ರ ಸರ್ಕಾರ ದೇಶದ ಯುವಕರಿಗೆ ಉದ್ಯೋಗ ಕೊಡ್ತಿವಿ. ವರ್ಷಕ್ಕೆ 2 ಸಾವಿರ ಕೋಟಿ ಉದ್ಯೋಗ ನಿರ್ಮಾಣ ಮಾಡ್ತಿವಿ ಅನ್ನೋ ಭರವಸೆಗಳನ್ನು ನೀಡಿದ್ದು ನಿಮಗೆಲ್ಲ ಗೊತ್ತಿರುವ ವಿಚಾರವೇ.
ಆದರೆ, ಕೇಂದ್ರ ಸರ್ಕಾರದ ಆದೇಶಕ್ಕೆ ಇಲ್ಲಿ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರದ ಆದೇಶವನ್ನೇ ನಂಬಿ ಕುಳಿತಿದ್ದ ಯುವಕರಿಗೆ ಕಳೆದ ಹತ್ತು ವರ್ಷದಿಂದ ನಿರ್ಲಕ್ಷ್ಯ ತೋರಲಾಗುತ್ತಿದೆ.
ಹೀಗಾಗಿ ಉದ್ಯೋಗಕ್ಕಾಗಿ ಯುವಕರು ಅಲೆದು ಅಲೆದು ಆತ್ಮಹತ್ಯೆಯ ದಾರಿ ಹಿಡಿಯುವ ಎಚ್ಚರಿಕೆ ನೀಡಿದ್ದಾರೆ.
ಕೈಯಲ್ಲಿ ಕೇಂದ್ರ ಸರ್ಕಾರದ ಆದೇಶ ಪ್ರತಿಯನ್ನು ಹಿಡಿದು, ನಮಗೆ ಉದ್ಯೋಗ ಕೊಡಿ. ಇಲ್ಲವಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಹೇಳ್ತಿರುವ ಈ ವ್ಯಕ್ತಿಯ ಹೆಸರು ಆಂಜನೇಯ ಪ್ರಸಾದ್.
ಹುಬ್ಬಳ್ಳಿಯ ಬೆಂಗೇರಿ ಬಡಾವಣೆಯ ನಿವಾಸಿ. ಈತ ಹುಬ್ಬಳ್ಳಿ-ಧಾರವಾಡ ಸೌಥ್-ವೆಸ್ಟರ್ನ್ ರೈಲ್ವೆ ಇಲಾಖೆಯಲ್ಲಿ 2002-03 ಒಂದು ವರ್ಷದ ಅಪ್ರೆಂಟಿಸ್ ಕೆಲಸವನ್ನು ಪೂರೈಸಿದ್ದಾರೆ.
ಅಲ್ಲದೇ 2003 ರಿಂದ 2010ರ ವರೆಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ. ಆದರೆ, 2010 ರಲ್ಲಿ ಕೇಂದ್ರ ಸರ್ಕಾರ
ಹೊರಡಿಸಿದ ಆದೇಶದಿಂದ ಇವರು ಮಾಡುತ್ತಿದ್ದ ಖಾಸಗಿ ಕೆಲಸಕ್ಕೆ ರಿಸೈನ್ ಮಾಡಿ, ಸರ್ಕಾರಿ ಕೆಲಸ ಸಿಗೊತ್ತೆ ಅನ್ನೋ ಆಸೆಯಿಂದ ಕಾಯ್ದು ಕುಳಿತಿದ್ದಾರೆ.
ಆದರೆ ಇಲ್ಲಿಯವರೆಗೆ ಇವರಿಗೆ ಕೆಲಸ ಸಿಗ್ತಿಲ್ಲ. ರೈಲ್ವೆ ಇಲಾಖೆ ಅಧಿಕಾರಿಗಳು, ಸಚಿವರಿಗೆ ಭೇಟಿ ಮಾಡಿ ಹಲವು ಬಾರಿ, ಮನವಿ ಮಾಡಿದ್ರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ.
ಹೀಗಾಗಿ ಕಳೆದ ಅಧಿಕಾರಿಗಳ ಕಚೇರಿಗೆ ಅಲೆದು ಅಲೆದು ರೋಸಿ ಹೋಗಿರುವ ಆಂಜನೇಯ, ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು, ಅಧಿಕಾರಿಗಳಿಗೆ ಒಂದು ತಿಂಗಳ ಕಾಲ ಗಡವು ನೀಡಿದ್ದಾರೆ.
ಡಿಸೆಂಬರ್ 28 ರಿಂದ ಜನವರಿ 28ರವರೆಗೆ ಸಮಯ ನೀಡಿರುವ ಆಂಜನೇಯ ಬೇಡಿಕೆ ಈಡೇರಿಸದಿದ್ದರೆ, ಆತ್ಮಹತ್ಯೆ ಮಾಡಿಕೊಂಡು ಜೀವ ಬಿಡುತ್ತೇನೆ ಅನ್ನೋ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೌಥ್-ವೆಸ್ಟರ್ನ್ ವಿಭಾಗದಲ್ಲಿ 150 ಕ್ಕೂ ಹೆಚ್ಚು ಯುವಕರು ಡಿಪ್ಲೋಮಾ ಮಾಡಿರುವವರು ಕೆಲಸ ಮಾಡಿಕೊಂಡಿದ್ದರು.
ಅವರೆಲ್ಲರೂ ಕೂಡ ಕೇಂದ್ರ ಸರ್ಕಾರದ 2010ರ ಆದೇಶದಂತೆ ಡಿ-ಗ್ರೂಪ್ ಹುದ್ದೆಯ ನೇಮಕ ಪ್ರಕ್ರಿಯೆ ನಡೆಯುಬೇಕಿತ್ತು. ಕಳೆದ ಹತ್ತು ವರ್ಷದಿಂದ ಯಾವುದೇ ಪ್ರಕ್ರಿಯೆ ನಡೆಯದೇ ಇರುವುದು ಇವರ ಆಕ್ರೋಶಕ್ಕೆ ಕಾರಣವಾಗಿದೆ.
ಅಲ್ಲದೇ ಬೇರೆ ಬೇರೆ ವಿಭಾಗದಲ್ಲಿ ಈಗಾಗಲೇ ಅಪ್ರೆಂಟಿಸ್ ಕೆಲಸ ಮಾಡಿಕೊಂಡಿದ್ದವರ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ನಮ್ಮ ವಿಭಾಗದಲ್ಲಿ ಮಾತ್ರ ನಮ್ಮನ್ನು ನೇಮಕ ಮಾಡಿಕೊಳ್ಳುತ್ತಿಲ್ಲ.
ಇದೇ ಕೆಲಸವನ್ನು ನಂಬಿಕೊಂಡು ಇಂದು ನಾವು ಬೀದಿಗೆ ಬಂದಿದ್ದೇವೆ. ಸರ್ಕಾರದ ಆದೇಶವನ್ನು ಮೀರಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರೋದು ಸರಿಯಲ್ಲ ಎಂದು ಹುಬ್ಬಳ್ಳಿ-ಧಾರವಾಡ ಸೌಥ್-ವೆಸ್ಟರ್ನ್ ವಿಭಾಗದ ಅಧಿಕಾರಿಗಳ ವಿರುದ್ದ ಉದ್ಯೋಗಕಾಂಕ್ಷಿಗಳು ಅಸಮಾಧಾನ ತೋಡಿಕೊಂಡಿದ್ದಾರೆ.
ಇತ್ತ ಕೇಂದ್ರ ಹೊರಡಿಸಿದ ಆದೇಶವನ್ನು ನಂಬಿ ಇದ್ದ ಕೆಲಸವನ್ನು ಕಳೆದುಕೊಂಡು ಕಂಗಾಲಾಗಿರುವ ಇವರು ಇದೀಗ ಬೇರೆ ಖಾಸಗಿ ಕಂಪನಿಗಳಲ್ಲೂ ಕೆಲಸ ಗಿಟ್ಟಿಸಿಕೊಳ್ಳಲು ವಯಸ್ಸಿನ ಅಂತರ ಅಡ್ಡಿಯಾಗಿದೆ.
ಹೀಗಾಗಿ ನನಗೆ ನೌಕರಿ ಕೊಡಿಸಿ ಅಂತಾ ಆಂಜನೇಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೂ ಮನವಿ ಮಾಡಿದ್ದಾರೆ. ಜೋಶಿ ಅವರು ದಾಖಲೆಗಳನ್ನು ಪರಿಶೀಲಿಸಿ ರೈಲ್ವೆ ಮಂತ್ರಿಗಳಿಗೆ ತಮ್ಮ ಪತ್ರ ಬರೆದು ಕೆಲಸ ಕೊಡುವಂತೆ ಕೋರಿದ್ದಾರೆ.
ಆದರೆ ಅದ್ಯಾವುದಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು ತಮ್ಮ ಮೊದಲಿನ ವರಸೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿದೇವರು ಕೊಟ್ಟರು ಪೂಜಾರಿ ಕೊಡ್ತಿಲ್ಲ ಅನ್ನೋ ಹಾಗೆ ಇವರ ಪರಿಸ್ಥಿತಿಯಾಗಿದೆ.
Kshetra Samachara
28/12/2020 06:22 pm