ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಹುಬ್ಬಳ್ಳಿ ಮೂರು ಸಾವಿರ ಮಠ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದೆ. ಮೂಜಗಂ ಇದ್ದಾಗ ನೂತನ ಪೀಠಾಧಿಪತಿ ಆಯ್ಕೆ ವಿವಾದ, ಇತ್ತೀಚೆಗೆ ದಿಂಗಾಲೇಶ್ವರ ಶ್ರೀಗಳ ಗೊಂದಲ, ಹಾಗೂ ಈಗ ಬೆಳಗಾವಿಯ ಪ್ರತಿಷ್ಠಿತ KLE ಸಂಸ್ಥೆಗೆ ಭಾರಿ ಪ್ರಮಾಣದಲ್ಲಿ ಭೂಮಿ ಪರಭಾರೆ ಮಾಡಿರುವ ವಿಷಯ ಭಕ್ತರಲ್ಲಿ ಆತಂಕ ಸೃಷ್ಠಿಸಿದೆ.
90 ರ ದಶಕದಲ್ಲಿ ಮೊದಲ ಬಾರಿಗೆ ನೂತನ ಪೀಠಾಧಿಪತಿ ವಿವಾದ ಕಾಣಿಸಿಕೊಂಡಾಗ ಮಠದ ಭಕ್ತರಲ್ಲಿ ಎರಡು ಗುಂಪುಗಳಾಗಿ ಭಾರಿ ವಿಕೋಪಕ್ಕೆ ಹೋಗಿತ್ತು. ತಿಪಟೂರಿನ ರುದ್ರಮುನಿ ಎಂಬವರು ತಾವೇ ಮುಂದಿನ ಪೀಠಾಧಿಪತಿ ಎಂದು ಘೋಷಿಸಿಕೊಂಡಾಗ ವಿವಾದ ನ್ಯಾಯಾಲಯ ಮಟ್ಟಿಲ್ಲು ಏರಿತ್ತು.
ಅಂದು ಪೀಠಾಧಿಪತಿಯಾಗಿದ್ದ ಮೂಜಗಂ ಅವರು ಈಗಿನ ಮೂಜಗು ಅವರನ್ನು ಮುಂದಿನ ಪೀಠಾಧಿಪತಿ ಎಂದು ಘೋಷಿಸಿದ್ದೇ ಅಂದಿನ ಬೆಳವಣಿಗೆಗೆ ಕಾರಣವಾಗಿತ್ತು. ಕೆಲವು ತಿಂಗಳುಗಳ ಕಾಲ ನಡೆದಿದ್ದ ಪ್ರತಿಭಟನೆ ಪರ ವಿರೋಧಗಳಿಂದಾಗಿ, ಭಕ್ತಿ ಭಾವಗಳಿಂದ ತುಂಬಿ ತುಳುಕುತ್ತಿದ್ದ ಮಠ ರಣರಂಗವಾಗಿತ್ತು. ಕೋರ್ಟ ಹಸ್ತಕ್ಷೇಪದಿಂದ ಸಮಸ್ಯೆ ಇತ್ಯರ್ಥವಾಗಿ ಮೂಜಗು ಅವರು ನೂತನ ಪೀಠಾಧಿಪತಿಗಳಾದರು.
ಕೆಲವು ತಿಂಗಳುಗಳ ಹಿಂದೆ ಅನಾರೋಗ್ಯದ ಕಾರಣ ಮೂಜಗು ಅವರು ಪೀಠ ತ್ಯಜಿಸುವುದಾಗಿ ಹೇಳಿದಾಗ ಬಾಲೇ ಹೊಸೂರು ಮಠ ದಿಂಗಾಲೇಶ್ವರ ಶ್ರೀಗಳ ಪ್ರವೇಶದಿಂದ ಭಾರಿ ಗದ್ದಲಕ್ಕೆ ಕಾರಣವಾಗಿತ್ತು. ಎರಡೂ ಗುಂಪುಗಳ ನಡುವೆ ಸಂಭವಿಸಬಹುದಾದ ಘರ್ಷಣೆಯನ್ನು ತಪ್ಪಿಸಲು ಕೆಲವು ದಿನಗಳ ಕಾಲ ಮಠಕ್ಕೆ ಭಕ್ತರ ಪ್ರವೇಶ ನಿರ್ಬಂಧ ಹೇರಿ ಪೊಲೀಸ್ ಕಾವಲು ಹಾಕಲಾಗಿತ್ತು.
ಈಗ ಸಮೀಪದ ಗಬ್ಬೂರ ಬಳಿ ಕೆಎಲ್ಇ ಸಂಸ್ಥೆಗೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಕಟ್ಟಲು ಹಿಂದಿನ ಮೂಜಗಂ ಅವರು 25 ಎಕರೆ ಭೂಮಿ ದಾನ ಮಾಡಿದ್ದು ಹಾಗೂ ಅದಕ್ಕೆ ಕೆಲವು ಭಕ್ತರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿರುವುದು.
ಸೇವಾ ಭಾವನೆ ಇಲ್ಲದೆ ಕೇವಲ ಹಣ ಗಳಿಸುವ ಉದ್ದೇಶದಿಂದ ವ್ಯವಹಾರ ಮಾಡುತ್ತಿರುವ ಕೆಎಲ್ಇ ಸಂಸ್ಥೆಗೆ ಯಾವುದೇ ರೀತಿ ಮಠದ ಆಸ್ತಿಯನ್ನು ದಾನ ಮಾಡಬಾರದು ಎಂಬುದು ಭಕ್ತರ ಒತ್ತಾಯವಾಗಿದೆ.
ಈಗಾಗಲೇ ಎರಡು ಬಾರಿ ಪತ್ರಿಕಾ ಗೋಷ್ಠಿ ಮಾಡಿ ತಮ್ಮವಿರೋಧ ವ್ಯಕ್ತಪಡಿಸಿರುವ ದಿಂಗಾಲೇಶ್ವರ ಶ್ರೀಗಳು,ಮೂರುಸಾವಿರ ಮಠದಿಂದ ಭೂಮಿ ದಾನ ಪಡೆದರೂ ಕೋಟ್ಯಂತರ ಹಣ ಹೂಡಿ ಕೆಎಲ್ ಇ ಪ್ರಾರಂಭಿಸುವ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯುವುದು ಅಸಾಧ್ಯ. ಇದೂ ಅಲ್ಲದೆ ಭಕ್ತರು ದಾನವಾಗಿ ನೀಡಿದ ಆಸ್ತಿಯನ್ನು ಈ ರೀತಿ ಯೋವುದೋ ಹಣ ಮಾಡುವ ಸಂಸ್ಥೆಗೆ ದಾನ ನೀಡುವುದು ಸರಿಯಲ್ಲ. ಸುಪ್ರಿಂ ಕೋರ್ಟ ಸಹ ಮಠದ ಆಸ್ತಿಯನ್ನು ದಾನ ನೀಡುವಂತಿಲ್ಲ ಎಂದು ಆದೇಶಿಸಿದೆ. ತಕ್ಷಣ ಮೂಜಗು ಅವರು ತಕ್ಷಣ ದಾನವನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಇಷ್ಟೇ ಅಲ್ಲ ಮಠದ ಆಸ್ತಿ ಕಬಳಿಸಲು ಅನೇಕರು ಹೊಂಚು ಹಾಕಿದ್ದಾರೆ. ಮಠದ ಆಸ್ತಿ ಉಳಿಸಲು ಹೋರಾಡುತ್ತಿರುವ ತಮ್ಮ ಮೇಲೆ ಕೆಲವರು ಹಲ್ಲೆ ಮಾಡಲು ಯತ್ನಿಸಿದ್ದಾರೆ. ತಮ್ಮ ಜೀವಕ್ಕೆ ಅಪಾಯವಿದೆ ಆದ್ದರಿಂದ ತಮಗೆ ರಕ್ಷಣೆ ನೀಡಬೇಕೆಂದೂ ಅವರು ಸರಕಾರವನ್ನು ಕೋರಿದ್ದಾರೆ.
ಇನ್ನೊಬ್ಬ ಭಕ್ತರಾದ ಆನಂದಯ್ಯ ಹಿರೇಮಠ, ಕೆಎಲ್ಇ ಸಂಸ್ಥೆಗೆ ಮಠದ ಭೂಮಿ ನೀಡಿರುವುದು ಕಾನೂನು ಬಾಹಿರ ಹಾಗೂ ಭೂಮಿ ಪೂಜೆ ಮಾಡಿರುವುದೂ ಕಾನೂನು ಬಾಹಿರ. ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದನ್ನು ನೋಡಿದರೆ ಇದರಲ್ಲಿ ರಾಜಕೀಯ ಹಸ್ತಕ್ಷೇಪವಾಗಿದೆ ಎಂದು ಆರೋಪಿಸಿದ್ದಾರೆ.
ಕೂಡಲೇ ಮೂಜಗು ಅವರು ಕೆಎಲ್ಇ ಸಂಸ್ಥೆಗೆ ನೀಡಿದ ಭೂಮಿಯನ್ನು ಮರಳಿ ಪಡೆಯಬೇಕು ಹಾಗೂ ಅಷ್ಟೇ ಗೌರವದಿಂದ ಸಂಸ್ಥೆಯೂ ಭೂಮಿಯನ್ನು ಮಠಕ್ಕೆ ಮರಳಿ ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.
* ಹಿಂದಿನ ಪೀಠಾಧಿಪತಿ ಮೂಜಗಂ ಅವರು ಕೆಎಲ್ಇ ಸಂಸ್ಥೆಗೆ ನೀಡಿರುವ ದಾನ ಪತ್ರದಲ್ಲಿ ಇರುವ ಷರತ್ತುಗೇಳೇನು?
* ಕೋಟ್ಯಂತರ ರೂ ಬೆಲೆ ಭೂಮಿಯನ್ನು ದಾನವಾಗಿ ನೀಡುತ್ತಿರುವುದರಿಂದ ಪ್ರತಿಯಾಗಿ ಮಠಕ್ಕೆ ಅಥವಾ ಭಕ್ತರಿಗೆ ಆಗುವ ಲಾಭಗಳೇನು?
* ದಾನ ನೀಡುವಾಗ ಅದಕ್ಕೆ ಸಮ್ಮತಿಸಿದ ಸಮಾಜದ ಹುಬ್ಬಳ್ಳಿ ಗಣ್ಯರು ಯಾರು?
* ಯಾರ ಗಮನಕ್ಕೂ ತಾರದೇ ಏಕಪಕ್ಷೀಯವಾಗಿ ಸಂಸ್ಥೆಗೆ ದಾನ ನೀಡಲಾಗಿದೆಯೇ
ಕೆಎಲ್ಇ ಅಂತಹ ಬೃಹತ್ ಸಂಸ್ಥೆ ಹುಬ್ಬಳ್ಳಿಯಲ್ಲಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಸ್ಥಾಪಿಸುತ್ತಿರುವುದು ಸ್ವಾತಾರ್ಹವೇ. ಆದರೆ ಯಾವುದೇ ವಿವಾದವಿಲ್ಲದೇ ಯೋಜನೆ ಅನುಷ್ಠಾನಗೊಳ್ಳಬೇಕು ಎಂಬುದು ಎಲ್ಲ ಆಶಯ.
ಹೀಗಾಗಿ ಮಠದ ಭಕ್ತರು ಹಾಗೂ ಸಾರ್ವಜನಿಕರಲ್ಲಿ ಮೂಡಿರುವ ಶಂಕೆಯನ್ನು ದೂರ ಮಾಡಬೇಕಾದುದು ಪೀಠಾಧಿಪತಿಗಳ ಕರ್ತವ್ಯ. ಕೆಎಲ್ಇ ಸಂಸ್ಥೆಗೆ ನೀಡಿದ ದಾನ ಪತ್ರದಲ್ಲಿ ಉಲ್ಲೇಖಿಸಲಾದ ಆಂಶಗಳನ್ನು ಬಹಿರಂಗಪಡಿಸುವುದು ಉಚಿತವಲ್ಲವೆ?
Kshetra Samachara
26/12/2020 08:15 pm