ಹುಬ್ಬಳ್ಳಿ: ಕಣ್ಣಿಗೆ ಕಾಣದ ಅದೊಂದು ವೈರಸ್ ಕಂಡು ಕಂಡಲೆಲ್ಲ ಕಂಬನಿ ಸುರಿಯುವಂತೆ ಮಾಡಿದೆ. ಕೋರೊನಾ ಹೊಡೆತಕ್ಕೆ ಇಡೀ ಮನುಕುಲವೇ ತಲ್ಲಣಗೊಂಡಿದ್ದು, ಕೊರೊನಾ ಶ್ರೀಮಂತರನ್ನೂ ಬಡವರನ್ನಾಗಿಸಿದೆ. ಬಡವರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಗೆ ತಂದು ನಿಲ್ಲಿಸಿದೆ.ಇನ್ನೂ ನಿರ್ಗತಿಕರು ಹಾಗೂ ಅನಾಥರ ಪಾಡು ದೇವರಿಗೆ ಪ್ರೀತಿ ಅನ್ನುವಂತಾಗಿದೆ.
ಹೌದು. ಅನಾಥರು ಹಾಗೂ ನಿರ್ಗತಿಕರ ಸೇವೆ ಮಾಡುವ ಅನೇಕ ಸಂಘ ಸಂಸ್ಥೆಗಳಿಗೂ ಕೊರೊನಾ ಕರಿನೆರಳು ಛಾಯೆ ಬಿದ್ದಿದೆ. ಬಂಧು, ಬಳಗವಿಲ್ಲದವರಿಗಾಗಿ ಕೆಲಸ ಮಾಡುವ ಅನಾಥಶ್ರಮಗಳು ನಿರ್ಗತಿಕರ ಕುಟೀರಗಳಿಗೆ ದಾನಿಗಳ ಕೊರತೆ ಎದುರಾಗಿದೆ.
ಕೋವಿಡ್ ಪೂರ್ವದಲ್ಲಿ ನಗರದ ಹತ್ತಕ್ಕೂ ಹೆಚ್ಚು ಅನಾಥಶ್ರಮಗಳು, ನಿರ್ಗತಿಕ ಮಕ್ಕಳ ಆಶ್ರಮಗಳಿಗೆ ದಾನಿಗಳು ದೇಣಿಗೆ ರೂಪದಲ್ಲಿ ಧನಸಹಾಯ, ಆಹಾರ ಸಾಮಾಗ್ರಿ, ಬಟ್ಟೆ, ಹಣ್ಣು ಹಂಪಲು ತರಕಾರಿಗಳನ್ನು ನೀಡುತ್ತಿದ್ದರು. ಇದರಿಂದ ಆಶ್ರಮಗಳನ್ನು ಯಾವುದೆ ಅಡತಡೆಯಿಲ್ಲದೆ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಮಾರ್ಚ 23 ರ ನಂತರ ಕೊರೊನಾ ಭಯದಿಂದ ಅನಾಥಶ್ರಮಗಳ ಕಡೆ ದಾನಿಗಳು ಸುಳಿಯುತ್ತಿಲ್ಲ.
ಈಗ ಒಂದೊಂದೆ ಶಾಲೆ ಆರಂಭವಾಗುತ್ತಿರುವದರಿಂದ ಅವರ ಬಂಧುಗಳ ಮನೆಗೆ ಹೋಗಿದ್ದ ಮಕ್ಕಳು ಬರುತ್ತಿದ್ದಾರೆ. ಈ ಮಕ್ಕಳ ಜವಾಬ್ದಾರಿ ನಮ್ಮ ಮೇಲೆ ಇರುವದರಿಂದ ತಂದೆ- ತಾಯಿ ಇಲ್ಲದ ಮಕ್ಕಳನ್ನು ಬೀದಿಗೆ ಬಿಡದೆ ಕಾಳಜಿ ವಹಿಸಿ ನೋಡಿಕೊಳ್ಳಲಾಗುತ್ತಿದೆ.ಕೊರೊನಾ ಪೂರ್ವದಲ್ಲಿ ಈ ಕುಟೀರದಲ್ಲಿ ಹಲವು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಸಾರ್ವಜನಿಕರು ಆಯೋಜನೆ ಮಾಡುತ್ತಿದ್ದರು. ತಮ್ಮ ಮಕ್ಕಳ ಹುಟ್ಟು ಹಬ್ಬ ಸಭೆ ಸಮಾರಂಭ ಆಯೋಜನೆ ಮಾಡುವದರಿಂದ ಅಲ್ಪ ಸಹಾಯ ಮಾಡುತ್ತಿದ್ದರು. ಮಕ್ಕಳು ಅವರ ಜೊತೆ ಬೆರೆಯುತ್ತಿದ್ದರು. ಇದರಿಂದ ಮಕ್ಕಳಲ್ಲಿ ಅನಾಥ ಪ್ರಜ್ಞೆಯು ದೂರವಾಗುತ್ತಿತ್ತು. ಮಕ್ಕಳು ಚುರುಕಾಗಿರುತ್ತಿದ್ದರು. ಆದರೆ ಈಗ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರಿಂದ ಮಕ್ಕಳ ಊಟ, ಬಟ್ಟೆ, ವಸತಿ ಸೇರಿದಂತೆ ಪ್ರತಿಯೊಂದಕ್ಕೂ ಖರ್ಚನ್ನು ಸಂಘ ಸಂಸ್ಥೆಗಳೇ ಭರಿಸಬೇಕಿದೆ.
Kshetra Samachara
26/09/2020 04:43 pm