ಹುಬ್ಬಳ್ಳಿ: ಸಿಎ ಸೈಟ್ ಸರಿಯಾದ ಹಾಗೂ ಸೂಚಿಸಿದ ರೀತಿಯಲ್ಲಿ ಬಳಕೆ ಮಾಡದೇ ಇರುವವರಿಗೆ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಬಿಸಿ ಮುಟ್ಟಿಸಲು ಮುಂದಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಾಗರಿಕ ಸೌಕರ್ಯ ನಿವೇಶನ ಪಡೆದ ಸಂಘ ಸಂಸ್ಥೆಗಳು ಅವುಗಳನ್ನು ಸದುಪಯೋಗ ಮಾಡಿಕೊಳ್ಳದೆ ಇರುವುದು ಹಾಗೂ ಬೇರೆ ಬೇರೆ ಉದ್ದೇಶಕ್ಕೆ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಎಚ್ಚೆತ್ತುಕೊಂಡ ಹುಡಾ ಸೂಕ್ತ ಕ್ರಮಕ್ಕೆ ಮುಂದಾಗಿದೆ.
ಹೌದು.. ಈಗಾಗಲೇ 359 ಸಿಎ ಸೈಟ್‌ಗಳನ್ನು ಹುಡಾ ನೀಡಿದ್ದು, ಅದರಲ್ಲಿ ಕನಿಷ್ಠ 200ಕ್ಕಿಂತ ಹೆಚ್ಚು ಸೈಟುಗಳನ್ನು ಸರಿಯಾಗಿ ಬಳಕೆಯಾಗಿಲ್ಲ ಎಂದು ಸರ್ವೆಯಲ್ಲಿ ಅಂದಾಜಿಸಲಾಗಿದೆ. ಬಳಕೆಯಾಗದೇ ಇರುವ ಸೈಟ್ ಗಳನ್ನು ಹುಡಾ ಮರಳಿ ಪಡೆಯಲಿದೆ ಎಂದು ಹುಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ ತಿಳಿಸಿದ್ದಾರೆ. ಯಾವುದೇ ಲೇಔಟ್ ನಿರ್ಮಾಣ ಮಾಡಬೇಕಾದಲ್ಲಿ ಸಿಎ ಸೈಟಿಗಾಗಿ ಜಾಗವನ್ನು ಮೀಸಲಿಡಬೇಕು ಎನ್ನುವುದು ನಿಯಮ. ಅಂತಹ ಸಿಎ ಸೈಟನ್ನು ನಾಗರಿಕ ಮೂಲ ಸೌಕರ್ಯ ಸಲುವಾಗಿ ಕಾಲಕಾಲಕ್ಕೆ ಅರ್ಜಿ ಕರೆದು ಹಂಚಿಕೆ ಮಾಡಿ ಅಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಮುದಾಯ ಭವನ, ಆಸ್ಪತ್ರೆ, ಶೈಕ್ಷಣಿಕ, ಸಾಂಸ್ಕೃತಿಕ ಭವನ, ಧಾರ್ಮಿಕ, ಶಿಶುಪಾಲನೆ, ಕ್ರೀಡಾ ಚಟುವಟಿಕೆ, ವ್ಯಾಯಾಮ ಶಾಲೆ, ನ್ಯಾಯಬೆಲೆ ಅಂಗಡಿ, ಹಣ್ಣಿನ ಅಂಗಡಿ, ತರಕಾರಿ ಮಳಿಗೆ, ಸಾಮಾಜಿಕ ಕಾರ್ಯಗಳಿಗೆ ಅರ್ಜಿ ಕರೆದು ಸಿಎ ಸೈಟ್ ನ್ನು ಹುಡಾ ನೀಡಿರುತ್ತದೆ. ಸಿಎ ಸೈಟಿನಲ್ಲಿ ಸ್ವಂತ ಉದ್ಯೋಗ, ವಾಣಿಜ್ಯ ಚಟುವಟಿಕೆ ಅಥವಾ ಮನೆ ನಿರ್ಮಾಣಕ್ಕಾಗಿ ಅವಕಾಶ ಇರುವುದಿಲ್ಲ. ಈ ಸಿಎ ನಿವೇಶನದಲ್ಲಿ ನಿಯಮವನ್ನು ಉಲ್ಲಂಘಿಸಿ ಕೆಲವೆಡೆ ಮನೆಗಳನ್ನು ನಿರ್ಮಿಸಿರುವುದು, ವಾಣಿಜ್ಯ ಮಳಿಗೆ ಕಟ್ಟಿರುವುದು, ಫಾರ್ಮ ಹೌಸ್ ಮಾಡಿರುವುದು, ಹಾಗೆ ಖಾಲಿ ಬಿಟ್ಟಿರುವುದು ಹುಡಾ ಗಮನಕ್ಕೆ ಬಂದಿವೆ. ಸ್ಥಳೀಯ ಲೇಔಟ್ ನಲ್ಲಿರುವ ನಿವೇಶನ ಮಾಲೀಕರು ಸಹ ಪ್ರಾಧಿಕಾರಕ್ಕೆ ಬಂದು ದೂರು ನೀಡಿದ್ದರಿಂದ ನೀಡಿರುವ ಸೈಟನ್ನು ವಾಪಸ್ಸು ಪಡೆಯಲು ಮುಂದಾಗಿದೆ.
ಈಗಾಗಲೇ 200 ಕ್ಕಿಂತ ಹೆಚ್ಚು ಸಿಎ ಸೈಟ್ ಗಳನ್ನು ಗುರುತಿಸಲಾಗಿದೆ. ದುರುಪಯೋಗ ಪಡಿಸಿರುವ 40 ಸೈಟ್ ಗಳಿಗೆ ನೋಟಿಸ್ ನೀಡಲಾಗಿದೆ. ಒಂದು ತಿಂಗಳಲ್ಲಿ ಪರಿಶೀಲಿಸಿ ನೋಟಿಸನ್ನು ನೀಡಿದ ಸಿಎ ಸೈಟನ್ನು ರದ್ದುಪಡಿಸಿ ಪುನಃ ಸಿಎ ಸೈಟ್ ಗೆ ಅರ್ಜಿ ಕರೆಯಲಾಗುವುದು. ಇದರಿಂದ ಹುಡಾಕ್ಕೆ ರೂ.125 ಕೋಟಿ ಆದಾಯ ಸಿಗಲಿದೆ ಎಂದು ನಾಗೇಶ್ ಕಲಬುರ್ಗಿ ತಿಳಿಸಿದ್ದಾರೆ.
Kshetra Samachara
13/07/2022 12:19 pm