ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಿಕ್ಷಣ ಸೇವೆಯ ಸೈನಿಕ ಅನೀಲಕುಮಾರ್ ಚೌಗಲಾ: ವಿದ್ಯಾನಿಕೇತನ ಕನಸನ್ನು ಸಾಕಾರಗೊಳಿಸಿದ ಸಾಧಕ

ಹುಬ್ಬಳ್ಳಿ: ಸೈನಿಕನಾಗಲು ಹೊರಟಿದ್ದವರು ಈಗ ಬಹುದೊಡ್ಡ ಸಾಮ್ರಾಜ್ಯವನ್ನೆ ಕಟ್ಟಿದ್ದಾರೆ. ಅಂದು ತಪ್ಪಿದ ಅದೊಂದು ಅವಕಾಶ ಈಗ ಸಾವಿರಾರು ಭವಿಷ್ಯದ ಕನಸಿನ ಸಾಕಾರದ ದೇಗುಲಕ್ಕೆ ಸ್ಪೂರ್ತಿಯಾಗಿದೆ. ಶಿಕ್ಷಣದ ಸೇವೆಯನ್ನೇ ಮೂಲ ಧೇಯೋದ್ದೇಶವನ್ನಾಗಿ ಮಾಡಿಕೊಂಡ ಸಾಧಕ ವ್ಯಕ್ತಿಯು ನಡೆದು ಬಂದ ದಾರಿ. ಹಾಗಿದ್ದರೇ ಯಾರು ಈ ಸಾಧಕ ವ್ಯಕ್ತಿ ಅಂತೀರಾ ಇಲ್ಲಿದೆ ನೋಡಿ ಸಕ್ಸಸ್ ಪರ್ಸನ್ ಸಕ್ಸಸ್ ಫುಲ್ ಸ್ಟೋರಿ...

ಹೀಗೆ ಕಣ್ಣು ಹಾಯಿಸಿದಷ್ಟೂ ಎತ್ತರಕ್ಕೆ ಬೆಳೆದು ನಿಂತ ಶಿಕ್ಷಣ ಸಂಸ್ಥೆ. ಭವ್ಯವಾದ ಕಟ್ಟಡದ ಜೊತೆಗೆ ವೈಭವದ ಚಿತ್ರಣಕ್ಕೆ ಸಾಕ್ಷಿಯಾದ ಜ್ಞಾನ ದೇಗುಲ. ಶಿಸ್ತು ಮತ್ತು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಇದೆಲ್ಲದಕ್ಕೂ ಸಾಕ್ಷಿಯಾಗಿರುವುದು ಹುಬ್ಬಳ್ಳಿಯ ಚೌಗುಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಕಾಲೇಜು. ಇಂತಹದೊಂದು ಬಹುದೊಡ್ಡ ಕನಸು ಸಾಕಾರಗೊಂಡಿರುವುದು ಮಾತ್ರ ಬಹುದೊಡ್ಡ ದಂತಕಥೆಯೇ ಸರಿ. ಹೌದು.. ಯಾವ ದಾರಿ ಪಟ್ಟಣದಿಂದ ಹಳ್ಳಿಯತ್ತ ಹೋಗುತ್ತದೆಯೋ ಅದೇ ದಾರಿ ಹಳ್ಳಿಯಿಂದ ಪಟ್ಟಣಕ್ಕೆ ಬರುತ್ತದೆ ಎಂಬುವಂತ ಮಾತಿಗೆ ಸೂಕ್ತ ನಿದರ್ಶನ ಎಂಬುವಂತೇ ಸಾಧಿಸಿ ತೋರಿಸಿದ್ದಾರೆ. ಸಾಧಕ ಪ್ರೋ.ಅನೀಲಕುಮಾರ್ ಚೌಗುಲಾ. ಚಿಕ್ಕದೊಂದು ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದ ಸಾಮಾನ್ಯ ಗಣಿತ ಉಪನ್ಯಾಸಕರು ಈಗ ಬಹುದೊಡ್ಡ ಶಿಕ್ಷಣ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದಾರೆ. ಪರಿಶ್ರಮ, ದೂರದೃಷ್ಟಿ, ಶ್ರದ್ಧೆ ಹಾಗೂ ಸ್ವಾಮಿ ನಿಷ್ಠೆಯಿಂದ ಸಾವಿರಾರು ಭವಿಷ್ಯದ ಕನಸಿಗೆ ಸ್ಪರ್ಧಾತ್ಮಕ ಮನೋಭಾವ ಎದುರಿಸುವ ಸಾಮರ್ಥ್ಯ ತುಂಬುವ ಕಾಯಕದಲ್ಲಿ ಶಿಕ್ಷಣ ಸಂಸ್ಥೆ ತೊಡಗಿದೆ.

ಅಥಣಿ ತಾಲೂಕಿನ ಚಿಕ್ಕ ಹಳ್ಳಿಯಾಗಿರುವ ಕುಸನಾಳ ಗ್ರಾಮದ ರೈತ ಕುಟುಂಬದಿಂದ ಬಂದ ಪ್ರೋ. ಅನೀಲಕುಮಾರ ಚೌಗಲಾ ಅವರು, ಧಾರವಾಡ ಜಿಲ್ಲೆಯಲ್ಲಿ ಶಿಕ್ಷಣ ಮುಗಿಸಿಕೊಂಡು ಗಣಿತ ಉಪನ್ಯಾಸಕರಾಗಿ ಟ್ಯುಟೋರಿಯಲ್ ನಡೆಸುತ್ತಿದ್ದವರು ಈಗ ಹುಬ್ಬಳ್ಳಿಯನ್ನು ಎಜುಕೇಶನ್ ಹಬ್ ಮಾಡುವ ಸದುದ್ದೇಶದಿಂದ ಸಾಕಷ್ಟು ಶ್ರಮವಹಿಸಿ ಬಹುದೊಡ್ಡ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪದವಿಪೂರ್ವ ಮಹಾವಿದ್ಯಾಲಯವು ವಿದ್ಯಾರ್ಥಿಗಳ ಶೈಕ್ಷಣಿಕ, ಬೌದ್ಧಿಕ ಹಾಗೂ ಜೀವನಮಟ್ಟವನ್ನು ಮತ್ತಷ್ಟು ವೃದ್ಧಿಸುವ ಹಿನ್ನೆಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಹೆಸರು ವಾಸಿಯಾಗಿದೆ. ಹುಬ್ಬಳ್ಳಿಯ ವಿದ್ಯಾನಗರದ ಅಮೃತ ಟಾಕೀಸ್ ಹತ್ತಿರದಲ್ಲಿ 2008-2009ರಲ್ಲಿ ಪ್ರಾರಂಭವಾಗಿರುವ ಶಿಕ್ಷಣ ಸಂಸ್ಥೆ 1996ರ ಮೇ 22ರಂದು ಚೌಗಲಾ ಟ್ಯುಟೋರಿಯಲ್ ನಿಂದ ಆರಂಭದ ಮೂಲಕ ಬೃಹತ್ ಕನಸಿಗೆ ಅಡಿಪಾಯ ಹಾಕಿದೆ. ಗುಣಮಟ್ಟವೊಂದನ್ನೇ ಆಧಾರವಾಗಿಟ್ಟುಕೊಂಡು ಹುಟ್ಟು ಹಾಕಲಾಗಿರುವ ಸಂಸ್ಥೆ ಹು-ಧಾ ಮಹಾನಗರದಲ್ಲಿ ಮಾತ್ರವಲ್ಲದೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮನೆಮಾತಾಗಿದೆ. ಹಾಗಿದ್ದರೇ ಈ ಸಂಸ್ಥೆಯ ಬಗ್ಗೆ ನಡೆದು ಬಂದ ದಾರಿಯ ಬಗ್ಗೆ ಸಾಧಕರು ಏನು ಹೇಳ್ತಾರೆ ಕೇಳಿ.

ಇನ್ನೂ ಪರಿಪೂರ್ಣತೆಯನ್ನು ಗುರಿಯಾಗಿಟ್ಟುಕೊಂಡು ಸತತ ಪರಿಶ್ರಮದ ಮೂಲಕವೇ ಉತ್ಕೃಷ್ಟ ಮಟ್ಟವನ್ನು ತಲುಪಲು ಸಾಧ್ಯ ಎಂಬುವುದಕ್ಕೆ ವಿದ್ಯಾನಿಕೇತನ ಪದವಿಪೂರ್ವ ಮಹಾವಿದ್ಯಾಲಯ ಸಾಕ್ಷಿಯಾಗಿದೆ. ದಶಮಾನೋತ್ಸವವನ್ನು ಪೂರ್ಣಗೊಳಿಸಿರುವ ಶಿಕ್ಷಣ ಸಂಸ್ಥೆಯ ಹಿಂದೆ ಪ್ರೋ.ಅನೀಲಕುಮಾರ್ ಚೌಗಲಾ ಅವರ ಸಾಕಷ್ಟು ಶ್ರಮದ ನೆನಪಿದೆ. ಸಂಸ್ಥೆಯು ನಡೆಯುವ ಪ್ರತಿಯೊಂದು ಹೆಜ್ಜೆಯೂ ಕೂಡ ಅರ್ಥಪೂರ್ಣವಾಗಿದೆ ಎಂಬುವುದಕ್ಕೆ ಸತತ 13ನೇ ಬಾರಿಗೆ ಧಾರವಾಡ ಜಿಲ್ಲೆಯಲ್ಲಿ ವಿದ್ಯಾನಿಕೇತನ ಕಾಲೇಜು ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಇಂದಿನ ಅರ್ಥವ್ಯವಸ್ಥೆ ಜ್ಞಾನದ ಅರ್ಥವ್ಯವಸ್ಥೆ. ಪ್ರಪಂಚದಾದ್ಯಂತ ಉದಾರೀಕರಣ, ಖಾಸಗಿಕರಣ, ಜಾಗತೀಕರಣದ ಅಲೆಗಳು ಬೀಸಲು ಪ್ರಾರಂಭವಾದ ದಿನಗಳಲ್ಲಿ ಸ್ಪರ್ಧೆಗೆ ವಿಶೇಷ ಸ್ಥಾನಮಾನ, ಸ್ಪರ್ಧೆಗೆ ಸವಾಲುಗಳ ಸಹಜ ಅಂತಹ ಸವಾಲುಗಳನ್ನು ಎದುರಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೆಯಾದ ಛಾಪನ್ನು ಮೂಡಿಸಿದ ಕೀರ್ತಿ ವಿದ್ಯಾನಿಕೇತನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯಕ್ಕೆ ಸಲ್ಲುತ್ತದೆ. ಪ್ರೋ.ಅನೀಲಕುಮಾರ ಚೌಗುಲಾ ಅವರ ಕನಸಿನ ಕೂಸಾಗಿರುವ ಶಿಕ್ಷಣ ಸಂಸ್ಥೆಯು ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಚೌಗುಲಾ, ನಿರ್ದೇಶಕರಾದ ಡಾ.ರಮೇಶ ಭಂಡಿವಾಡ, ಶ್ರೀ ಗಂಗಾಧರ ಕಮಡೊಳ್ಳಿ, ಶ್ರೀ ವೀರೇಂದ್ರ ಛೆಡಾ, ಡಾ.ರವೀಂದ್ರ ಗುರವ ಹಾಗೂ ಪ್ರಿನ್ಸಿಪಲ್ ಡಾ.ಆನಂದ ಮುಳಗುಂದ ಇವರು ಹಗಲಿರುಳು ಶ್ರಮಿಸಿದ ಪ್ರತಿಫಲ ಈಗ ಹೆಮ್ಮರವಾಗಿ ಬೆಳೆದಿದೆ.

ಸಾಕಷ್ಟು ಸಂಪತ್ತು ಇದ್ದು, ಸಾಧನೆ ಮಾಡುವುದು ದೊಡ್ಡದಲ್ಲ. ಏನು ಇಲ್ಲದೆಯೇ ತನ್ನ ಕೈ ಬಲದ ಹಾಗೂ ಬೌದ್ಧಿಕ ಶ್ರಮದಲ್ಲಿಯೇ ಸಾಮ್ರಾಜ್ಯ ಕಟ್ಟುವುದೇ ಬಹುದೊಡ್ಡ ಸಾಧನೆ. ಕೃಷಿ ಕುಟುಂಬದಿಂದ ಬಂದಿರುವ ಚೌಗಲಾ ಅವರು ಕುಟುಂಬದ ಸಹಕಾರದಿಂದ ಬಹುದೊಡ್ಡ ಶಿಕ್ಷಣ ಸಾಮ್ರಾಜ್ಯವನ್ನು ಕಟ್ಟಿರುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಹಾಗಿದ್ದರೇ ಕುಟುಂಬದ ಬಗ್ಗೆ ಅವರು ನಡೆದು ಬಂದ ದಾರಿಯ ಬಗ್ಗೆ ಸಾಧಕರು ಏನ ಹೇಳ್ತಾರೆ ಕೇಳಿ..

ಇನ್ನೂ ಬೈರಿದೇವರಕೊಪ್ಪದ ಬಳಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿರುವ ಪ್ರೋ.ಅನೀಲಕುಮಾರ್ ಚೌಗಲಾ ಅವರು ಪ್ರತಿ ವರ್ಷ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಸರಸ್ವತಿ ಸೇವೆ ಮಾಡುತ್ತಿದ್ದಾರೆ. ದೇಶ ಸೇವೆ ಮಾಡಲು ಹೊರಟವರು ಈಗ ಶಿಕ್ಷಣ ಸೇವೆಯ ಮೂಲಕವೇ ದೇಶಕ್ಕೆ ಉತ್ತಮ ಪ್ರಜೆಯನ್ನು ಕೊಡುಗೆಯಾಗಿ ನೀಡುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೇ ಈಗ ಪದವಿಪೂರ್ವ ಶಿಕ್ಷಣ ಸಂಸ್ಥೆಯ ಮೂಲಕ ವಿಜ್ಞಾನ ವಿಷಯದ ಶಿಕ್ಷಣದ ಜೊತೆಗೆ ಈಗ ನೀಟ್ ಅಕಾಡೆಮಿ ಆರಂಭ ಮಾಡಿದ್ದು, ಹುಬ್ಬಳ್ಳಿಯನ್ನು ರಾಜಸ್ಥಾನದ ಕೋಟಾ ಮಾಡಲು ನಿರ್ಧಾರ ಮಾಡಿದ್ದಾರೆ.

ಈಗಾಗಲೇ ಗುಣಮಟ್ಟದ ಶಿಕ್ಷಣದ ಮೂಲಕವೇ ಹೆಸರು ವಾಸಿಯಾಗಿರುವ ಚೌಗಲಾ ಶಿಕ್ಷಣ ಸಂಸ್ಥೆ ಹೊಸ ಕಟ್ಟಡದಲ್ಲಿ ಸಾಕಷ್ಟು ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದು, ಅಧುನಿಕ ತಂತ್ರಜ್ಞಾನದ ಕ್ಲಾಸ್ ರೂಮ್, ಹೈಟೆಕ್ ಲ್ಯಾಬ್, ನುರಿತ ಶಿಕ್ಷಕ ವೃಂದ, ಹಾಸ್ಟೆಲ್, ಬಸ್ ವ್ಯವಸ್ಥೆ ಹೀಗೆ ಹೇಳಿದರೇ ಮುಗಿಯದ ರೀತಿಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ಸಾಧಕರ ಬಗ್ಗೆ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಶ್ರೀದೇವಿ ಚೌಗಲಾ ಏನ ಹೇಳ್ತಾರೆ ಕೇಳಿ.

ಒಂದು ಸಣ್ಣ ಮನೆ ಕಟ್ಟಲು ಕೂಡ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಆದರೆ ಇಂತಹದೊಂದು ಶೈಕ್ಷಣಿಕ ಸಾಮ್ರಾಜ್ಯದ ನಿರ್ಮಾಣಕ್ಕೆ ನಿಜಕ್ಕೂ ಸಾಕಷ್ಟು ಶ್ರಮದ ಅವಶ್ಯಕತೆ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಅನಿಲ್ ಕುಮಾರ್ ಚೌಗಲಾ ಅವರಿಗೆ ಶಿಕ್ಷಣ ಪಡೆಯಲು ಸಹಾಯ ಮಾಡಿದ್ದು ಜೈನ್ ಬೋರ್ಡಿಂಗ್ ಹುಬ್ಬಳ್ಳಿ.

ಇನ್ನೂ ವಿದ್ಯಾರ್ಥಿಗಳ ಸಾಧನೆಯ ನನ್ನ ಸಾಧನೆ ಎಂಬುವಂತ ಮಾತನ್ನು ದೇಯೋದ್ದೇಶವನ್ನಾಗಿ ಮಾಡಿಕೊಂಡ ಪ್ರೋ. ಅನೀಲಕುಮಾರ್ ಚೌಗಲಾ ರಾಜ್ಯಾದ್ಯಂತ ಹೆಸರು ವಾಸಿಯಾಗಿದ್ದಾರೆ. ಇವರ ಕಾರ್ಯವೈಖರಿ, ಸಾಮಾಜಿಕ ಕಾಳಜಿ, ಶಿಕ್ಷಣ ಪ್ರೇಮದ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಏನು ಹೇಳ್ತಾರೆ ಕೇಳಿ.

ಒಟ್ಟಿನಲ್ಲಿ ಚಿಕ್ಕದೊಂದು ಟ್ಯುಟೋರಿಯಲ್ ಮೂಲಕ ಆರಂಭಗೊಂಡ ಶಿಕ್ಷಣ ಸೇವೆ ಈಗ ಬಹುದೊಡ್ಡ ಸಂಸ್ಥೆಯಾಗಿ ಹೊರ ಹೊಮ್ಮಿರುವುದು ನಿಜಕ್ಕೂ ವಿಶೇಷವಾಗಿದೆ. ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿಯ ಮೂಲಕ ತಮ್ಮ ಸೇವೆಯನ್ನು ಮಾಡುತ್ತಿರುವ ಸಾಧಕರಿಗೆ ನಮ್ಮದೊಂದು ಸಲಾಂ..

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/09/2022 07:14 pm

Cinque Terre

98.84 K

Cinque Terre

0

ಸಂಬಂಧಿತ ಸುದ್ದಿ