ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಅಣ್ಣಾರ.. ಅಕ್ಕಾರ.. ತಂಗ್ಯಾರ.. ಮತ್ತ ಗ್ರಾಮ ಪಂಚಾಯ್ತಿ ಎಲೆಕ್ಷನ್ ಬಂದೈತ್ರಿ.. ಈ ಹಿಂದಕ ಮಾಡಿದ ತಪ್ಪು ಮತ್ತ ನೀವು ಮಾಡಾಕ ಹೋಗಬ್ಯಾಡ್ರಿ.. ಆ ತಪ್ಪು ಏನು ಅಂತ ಕೇಳ್ತೀರೇನು? ಅದ ರೀ ಎಲೆಕ್ಷನ್ ಟೈಮ್ ನ್ಯಾಗ ಕಲರ್ ಕಲರ್ ಕಾಗಿ ಹಾರಿಸಿ ಎಲೆಕ್ಷನ್ ಗೆದ್ದು, ಪಂಚಾಯ್ತಿ ಕಟ್ಟಿ ಹತ್ತಿದ ಮ್ಯಾಲ ನಿಮ್ಮದ ರೊಕ್ಕಾ ತಿಂದು ನಿಮಗ ಯೋಜನೆಗಳನ್ನ ಮುಟ್ಟಿಸಿದ ಮೇಂಬರ್ ಗಳಿಗೆ ಈಗ ಬುದ್ಧಿ ಕಲಸು ಟೈಮ್ ಬಂದೈತಿ ನೋಡ್ರಿ.
ಆಶ್ರಯ ಮನಿ, ಬಸವ ವಸತಿ, ಇಂದಿರಾ ಆವಾಸ್ ಯೋಜನೆ, ಬದುವುಗಳ ನಿರ್ಮಾಣ ಸೇರಿದಂಗ ಇತ್ಯಾದಿ ಯೋಜನೆಗಳನ್ನ ನಿಮಗ ಮುಟ್ಟಿಸಬೇಕು ಅಂದ್ರ ನೀವೇ ಆರಿಸಿ ಕಳಿಸಿದ ಮೇಂಬರ್ ಗಳು ನಿಮ್ಮ ಕಡೆ ರೊಕ್ಕಾ ಇಸಕೊಂಡು ತಮ್ಮ ಬೊಕ್ಕಸಾ ತುಂಬಿಸಿಕೊಂಡಾರ ನೋಡ್ರಿ ಅಂತಾವ್ರಿಗೆ ಈ ಸಲಾ ಬುದ್ಧಿ ಕಲಸ್ರಿ. ಈ ಸಲಾನೂ ಅಂತವರನ್ನೇ ಆರಿಸಿ ತಂದು ಮತ್ತ ತಪ್ಪು ಮಾಡಾಕ ಹೋಗಬ್ಯಾಡ್ರಿ ಅನ್ನೋದು ನಮ್ಮ ವಾದಾ ಐತಿ ನೋಡ್ರಿ..
ಧಾರವಾಡ ಜಿಲ್ಲೆದಾಗ ಪಂಚಾಯ್ತಿ ಚುನಾವಣೆ ಈಗಾಗ್ಲೆ ಸಾಕಷ್ಟು ರಂಗು ಪಡದೈತಿ. ಈ ಚುನಾವಣೆಯೊಳಗ ಪಕ್ಷ ಇಲ್ಲದೇ ಹೋದ್ರೂ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸಾಕಷ್ಟು ಕಸರತ್ತ ನಡಸಾಕತ್ತಾರ ನೋಡ್ರಿ.. ಈ ಸಲಾ ಕಳೆದ ಸಾಲಿಗಿಂತ ಪಂಚಾಯ್ತಿ ಚುನಾವಣೆ ರಂಗ ಪಡಕೊಂಡೈತಿ ನೋಡ್ರಿ.
ಈ ಹಿಂದ ಎಲೆಕ್ಷನ್ನಿಗೆ ನಿಂತ ಗೆದ್ದು ಬಂದಿದ್ದ ಮೇಂಬರ್ ಗಳು ಮತ್ತ ಚುನಾವಣೆಗೆ ನಿಂತಾರ. ನಾವು ಅದನ್ನ ಮಾಡೇವಿ ಇದನ್ನ ಮಾಡೇವಿ ಅಂತಾ ಜನರ ಮುಂದ ಮತ್ತ ಕಲರ್ ಕಲರ್ ಕಾಗಿ ಹಾರಸಾಕತ್ತಾರ. ಇನ್ನ ಹೊಸದಾಗಿ ನಿಂತಿರೋ ಅಭ್ಯರ್ಥಿಗಳು ನಾವೂ ಅದನ್ನ ಮಾಡ್ತೇವಿ ಇದನ್ನ ಮಾಡ್ತೇವಿ ಅನ್ನಾಕತ್ತಾರ. ಆದ್ರ ಇದರ ಮಧ್ಯೆ ಮತದಾರರಾದ ನಾವು ಯಾರು ಸರಿ ಅದಾರೋ ಯಾರು ನಮ್ಮ ಕೆಲಸಾ ಸರಿಯಾಗಿ ಮಾಡಿಕೊಡ್ತಾರೋ ಅಂತವರನ್ನ ಆರಿಸಿ ತರೋ ಕೆಲಸಾ ಮಾಡಬೇಕಾಗೈತಿ ನೋಡ್ರಿ.
ಧಾರವಾಡ ಜಿಲ್ಲಾದೊಳಗ ಎರಡು ಹಂತದೊಳಗ ಚುನಾವಣೆ ನಡ್ಯಾಕತ್ತೈತ್ರಿ. ಡಿ.22 ನೇ ತಾರೀಖಿಗೆ ಧಾರವಾಡ, ಅಳ್ನಾವರ, ಕಲಘಟಗಿ ತಾಲೂಕಿನ್ಯಾಗ ಮೊದಲನೇ ಹಂತದ ಎಲೆಕ್ಷನ್ ನಡೀತೈತಿ. ಡಿ.27ಕ್ಕ ಕುಂದಗೋಳ, ನವಲಗುಂದ, ಹುಬ್ಬಳ್ಳಿ, ಅಣ್ಣಿಗೇರಿ ತಾಲೂಕಿನ್ಯಾದ್ಯಂತ ಎಲೆಕ್ಷನ್ ನಡೀತಾವ್ರಿ. ನೆನಪಿರಲಿ ಸರ್ಕಾರದಿಂದ ಉಚಿತವಾಗಿ ಬರೋ ಯೋಜನೆಗಳನ್ನ ನಮ್ಮದ ರೊಕ್ಕಾ ತಿಂದ ನಮಗ ತಲುಪಿಸಿದ ಮೇಂಬರ್ ಗಳಿಗೆ ತಕ್ಕ ಪಾಠಾ ಕಲಿಸೋದನ್ನ ಮರಿಬ್ಯಾಡ್ರಿ.
Kshetra Samachara
18/12/2020 10:47 pm