ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕರಡಿ ಕಚ್ಚಿದವನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಜೀವ ದಾನ ಮಾಡಿದ ಕಿಮ್ಸ್ ವೈದ್ಯರು

ಹುಬ್ಬಳ್ಳಿಯ ಕಿಮ್ಸ್ ಉತ್ತರ ಕರ್ನಾಟಕದ ಬಡ ರೋಗಿಗಳ ಆಶಾ ಕಿರಣ. ಕೋವಿಡ್ ಬಂದಾಗಲಂತೂ ಸಹಸ್ರಾರು ಜನರಿಗೆ ಚಿಕಿತ್ಸೆ ನೀಡಿ, ಜೀವದಾನ ಮಾಡಿದ ಸಂಜೀವಿನಿ. ಮೊನ್ನೆಯಷ್ಟೇ ಓಪನ್ ಹಾರ್ಟ್ ಸರ್ಜರಿ ಮಾಡುವ ಪ್ರಯೋಗದಲ್ಲಿಯೂ ಯಶಸ್ವಿಯಾಗಿತ್ತು. ಇದೀಗ ಕರಡಿ ದಾಳಿಗೆ ತುತ್ತಾದ ವ್ಯಕ್ತಿಯೋರ್ವನ ಜೀವವನ್ನು ಉಳಿಸಿದ್ದಷ್ಟೇ ಅಲ್ಲದೇ ಮತ್ತೊಂದು ಚಮತ್ಕಾರಿ ಚಿಕಿತ್ಸೆ ಮಾಡುವ ಮೂಲಕ ಸರ್ಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದು ಸಾಬೀತು ಮಾಡಿದೆ.

ಹೌದು, ಹೀಗೆ ದೃಶ್ಯದಲ್ಲಿ ನಿಂತಿರುವ ಫಕ್ಕಿರಪ್ಪ, ಕಾರವಾರ ಜಿಲ್ಲೆಯ ಮುಂಡಗೋಡ ತಾಲೂಕಿನವರು. ಕಳೆದ ಜುಲೈ 30ರಂದು ತಮ್ಮ ಹೊಲಕ್ಕೆ ತೆರಳುತ್ತಿದ್ದ ವೇಳೆಯಲ್ಲಿ, ಕರಡಿಯೊಂದು ಏಕಾಏಕಿ ಮೈಮೇಲೆ ಎರಗಿ ಮಾರಣಾಂತಿಕವಾಗಿ ದಾಳಿ ನಡೆಸಿತ್ತು. ಪರಿಣಾಮ ಫಕ್ಕೀರಪ್ಪನ ಮೆದುಳು, ಕಣ್ಣು, ಮತ್ತು ಮುಖದ ಮೇಲ್ಭಾಗ ಶೇ.90 ರಷ್ಟು ಚರ್ಮ ಕಿತ್ತು ವಿರೂಪಗೊಂಡಿತ್ತು. ತಕ್ಷಣವೇ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಜುಲೈ 30 ರಂದು ದಾಖಲು ಮಾಡಲಾಗಿತ್ತು.

ಇದೀಗ ಕಿಮ್ಸ್ ಆಸ್ಪತ್ರೆಯ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆ ತಜ್ಞ ವೈದ್ಯರು ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸಕರ ಸಹಯೋಗದಲ್ಲಿ, ಸೆಪ್ಟೆಂಬರ್ 16 ರಂದು ಸುದೀರ್ಘ 6 ಗಂಟೆಗಳ ಗಂಭೀರ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗಿದೆ. ಇದರಿಂದ ಫಕ್ಕೀರಪ್ಪ ಜೀವಾಪಾಯದಿಂದ ಪಾರಾಗಿದ್ದಾನೆ. ಇದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಸಾಧನೆ.

ಸದ್ಯ ಕಣ್ಣಿನ ಪ್ರಮುಖ ಭಾಗಗಳಿಗೆ ಯಾವುದೇ ರೀತಿಯ ಅಪಾಯವಾಗದಂತೆ, ಪುನರ್ ರಚನೆ ಮಾಡಲು ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ಆಸ್ಪತ್ರೆಯ ತಜ್ಞ ಡಾ.ಮಂಜುನಾಥ, ವಸಂತ ಕಟ್ಟಿಮನಿ, ಅನುರಾಧ ಹಾಗೂ ವಿವೇಕಾನಂದ ಜೇವರ್ಗಿ ನೇತೃತ್ವದ ತಂಡ ಯಶಸ್ವಿಯಾಗಿದೆ.

ಈ ರೋಗಿಯ ತೊಡೆಯ ಚರ್ಮವನ್ನು ತೆಗೆದು ಮುಖಕ್ಕೆ ಜೋಡಿಸುವ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಇದೀಗ ಫಕ್ಕೀರಪ್ಪ ಯಥಾಸ್ಥಿತಿಗೆ ಮರಳಿದ್ದಾರೆ. ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ 1.50 ಲಕ್ಷ ರೂ ವೆಚ್ಚವಾಗಬಹುದಾದ ಗಂಭೀರ ಸ್ವರೂಪದ ಈ ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ಉಚಿತವಾಗಿ ನಡೆಸಿ ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಕಿಮ್ಸ್ ಆಸ್ಪತ್ರೆಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ, ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/09/2022 03:30 pm

Cinque Terre

35.56 K

Cinque Terre

13

ಸಂಬಂಧಿತ ಸುದ್ದಿ