ಧಾರವಾಡ: ಮಳೆಗಾಲ ಆರಂಭವಾಗಿ ಎರಡು ತಿಂಗಳಾಗಿದೆ. ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಇದೀಗ ಧಾರವಾಡ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಕಾಡುತ್ತಿವೆ.
ಹೌದು! ಮಳೆಗಾಲ ಆರಂಭವಾದರೆ ಸಹಜವಾಗಿಯೇ ಸಾಂಕ್ರಾಮಿಕ ರೋಗಗಳು ಹಬ್ಬುತ್ತವೆ. ಚಿಕೂನ್ ಗುನ್ಯಾ ಹಾಗೂ ಡೆಂಗಿಯಂತಹ ಜ್ವರಗಳು ಅಟ್ಯಾಕ್ ಮಾಡುತ್ತವೆ. ಧಾರವಾಡ ತಾಲೂಕಿನಲ್ಲಿ ಇದೀಗ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ ಸದ್ಯ 11 ಡೆಂಗಿ ಪ್ರಕರಣಗಳು ಕಂಡು ಬಂದಿದ್ದರೆ, ಅದರಲ್ಲಿ ಐದು ಪ್ರಕರಣಗಳು ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದಲ್ಲೇ ಪತ್ತೆಯಾಗಿವೆ.
ಹೀಗಾಗಿ ಸಲಕಿನಕೊಪ್ಪ ಗ್ರಾಮ ಇದೀಗ ಡೆಂಗಿ ಹಾಟಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಮಳೆಗಾಲದಲ್ಲಿ ರಸ್ತೆಗಳು, ಚರಂಡಿಗಳು ಗಲೀಜಾಗುವುದರಿಂದ ಸೊಳ್ಳೆಗಳ ಕಾಟ ಕೂಡ ಹೆಚ್ಚಾಗುತ್ತದೆ. ಸೊಳ್ಳೆಯಿಂದಲೇ ಈ ಡೆಂಗಿ ಜ್ವರ ಬರುತ್ತಿದ್ದು, ಸಾರ್ವಜನಿಕರು ಸ್ವಚ್ಛತೆ ಕಾಪಾಡುವಂತೆ ಹಾಗೂ ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ಆರೋಗ್ಯ ಇಲಾಖೆ ಮನವಿ ಮಾಡುತ್ತಿದೆ.
ಕಳೆದ ಎರಡು ತಿಂಗಳ ಹಿಂದಷ್ಟೇ ಸಲಕಿನಕೊಪ್ಪ ಗ್ರಾಮದಲ್ಲಿ ಓರ್ವ ಬಾಲಕಿ ಡೆಂಗಿ ಜ್ವರದಿಂದಲೇ ಸಾವಿಗೀಡಾಗಿದ್ದಾಳೆ. ಈ ಒಂದೇ ಗ್ರಾಮದಲ್ಲಿ ಐದು ಡೆಂಗಿ ಪ್ರಕರಣಗಳು ಪತ್ತೆಯಾಗಿರುವುದರಿಂದ ಆಶಾ ಕಾರ್ಯಕರ್ತೆಯರು ಹಾಗೂ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು ಮನೆ, ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡುವುದರ ಜೊತೆಗೆ ಅವರು ಕುಡಿಯುವ ನೀರು ಹಾಗೂ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆಯೂ ಪರಿಶೀಲನೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯ್ತಿಯವರು ಗಲ್ಲಿ ಗಲ್ಲಿಗೂ ಫಾಗಿಂಗ್ ಮಾಡುತ್ತಿದ್ದಾರೆ.
ಮಳೆಗಾಲದಲ್ಲಿ ಸಹಜವಾಗಿ ಎಲ್ಲರಲ್ಲಿ ನೆಗಡಿ, ಜ್ವರ ಕಾಣಿಸಿಕೊಳ್ಳುತ್ತದೆ. ಆದರೆ, ಇದರ ಬಗ್ಗೆ ಯಾರೂ ನಿರ್ಲಕ್ಷ ಮಾಡಬಾರದು. ಡೆಂಗಿ ಅಟ್ಯಾಕ್ ಆದವರಲ್ಲೂ ಮೈ, ಕೈ ನೋವು, ಸಂದಿ ನೋವು ಹಾಗೂ ಜ್ವರ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಈ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರ ಸಂಪರ್ಕ ಮಾಡಬೇಕಾಗಿದೆ. ಸದ್ಯ ಸಲಕಿನಕೊಪ್ಪ ಗ್ರಾಮದಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿದ್ದರಿಂದ ಪಂಚಾಯ್ತಿಯವರು ಮತ್ತು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಜ್ವರ ಪಕ್ಕದ ಹಳ್ಳಿಗಳಿಗೂ ಹಬ್ಬದಂತೆ ಆಶಾ ಕಾರ್ಯಕರ್ತೆಯರು ಸರ್ವೆ ಮಾಡಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಧಾರವಾಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡೆಂಗಿ, ಚಿಕೂನ್ ಗುನ್ಯಾ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಜನತೆ ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕಿದೆ. ಶುದ್ಧ ನೀರನ್ನು ಕುಡಿಯುವುದು, ಸೊಳ್ಳೆ ಪರದೆ ಬಳಸುವುದು, ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲೇಬೇಕಿದೆ.
Kshetra Samachara
16/07/2022 06:06 pm