ಹುಬ್ಳಳ್ಳಿ: ತುರ್ತು ಆರೋಗ್ಯ ಸೇವೆಗಳ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಿಮ್ಸ್ ಆಸ್ಪತ್ರೆಯನ್ನು ವಿಶ್ವ ದರ್ಜೆಯ ಅರಿವಳಿಕೆ ಸಾಧನ ಮತ್ತು ಪಲ್ಸ್ ಆಕ್ಸಿಮೀಟರ್ ಗಳೊಂದಿಗೆ ಸುಸಜ್ಜಿತಗೊಳಿಸಿರುವುದು ತುಂಬ ಸಂತೋಷ ತಂದಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಎಲ್ ಟಿಐ ಸಂಸ್ಥೆ, ಕಿಮ್ಸ್ ಮತ್ತು ದೇಶಪಾಂಡೆ ಪ್ರತಿಷ್ಠಾನದ ಸಹಯೋಗದೊಂದಿಗೆ ಇದು ಸಾಧ್ಯವಾಗಿದೆ.
ಕಿಮ್ಸ್ ಕೇವಲ ಕರ್ನಾಟಕದ ಮಾತ್ರವಲ್ಲ, ದೇಶದಲ್ಲೇ ಒಂದು ಅತ್ಯುತ್ತಮವಾದ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಆಗಿದೆ. ಆಸ್ಪತ್ರೆಯು ಬಹುದೊಡ್ಡಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಅದರಲ್ಲೂ ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭ ಅದು ನೀಡಿದ ಸೇವೆ ಅನನ್ಯ ಎಂದರು.
ಕಿಮ್ಸ್ ಆಸ್ಪತ್ರೆಯು ಉತ್ತರ ಕರ್ನಾಟಕ ಭಾಗದ 8-9 ಜಿಲ್ಲೆಗಳ ರೋಗಿಗಳಿಗೆ ಸೇವೆ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ 2000 ಆಮ್ಲಜನಕ ಪಾಯಿಂಟ್ ಗಳಿವೆ. ಕೋವಿಡ್ ಅವಧಿಯಲ್ಲಿ ಪ್ರತಿ ನಿತ್ಯ ಎಂಬಂತೆ 20 ಟನ್ ದ್ರವೀಕೃತ ಆಮ್ಲಜನಕವನ್ನು ಬಳಸಲಾಗುತ್ತಿತ್ತು. ಅಷ್ಟಾಗಿಯೂ 20-50 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೆಚ್ಚುವರಿಯಾಗಿ ಶೇಖರಿಸಿ ಇಡಲಾಗುತ್ತಿತ್ತು. ಆಸ್ಪತ್ರೆಯ ಎಲ್ಲ ಸಿಬ್ಬಂದಿ ಮತ್ತು ದೇಶಪಾಂಡೆ ಪ್ರತಿಷ್ಠಾನದ ಕಾರ್ಯಕರ್ತರು ಮಾರಣಾಂತಿಕ ವೈರಸ್ ವಿರುದ್ಧ ದೊಡ್ಡ ಹೋರಾಟ ನಡೆಸಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ಲಾಘಿಸಿದರು.
ಕಿಮ್ಸ್ ಆಸ್ಪತ್ರೆಗೆ ಆರೋಗ್ಯ ರಕ್ಷಕ ಪರಿಕರಗಳನ್ನು ಒದಗಿಸುವುದೆಂದರೆ ಉತ್ತರ ಕರ್ನಾಟಕದ ಬಹುತೇಕ ಎಲ್ಲ ರೋಗಿಗಳ ನೆರವಿಗೆ ನಿಂತಂತೆ. ಇಂಥ ದೊಡ್ಡ ನೆರವನ್ನು ನೀಡಿದ ಎಲ್ ಟಿಐ ಗೆ ಕೃತಜ್ಞತೆಗಳು. ಇಂಥಹುದೇ ಸಹಯೋಗ, ಸಹಕಾರಗಳು ಕಿಮ್ಸ್ ನ್ನು ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಜಾಗತಿಕ ಮಟ್ಟಕ್ಕೇರಿಸಲಿ ಎಂದರು.
ಎಲ್ ಟಿಐ ಸಂಸ್ಥೆಯು ಕಿಮ್ಸ್ ಆಸ್ಪತ್ರೆಗೆ ಕೋವಿಡ್ ಪರಿಹಾರದ ಭಾಗವಾಗಿ ಈ ಸಾಧನಗಳನ್ನು ಉದಾರವಾಗಿ ನೀಡಿದೆ. ಸುಮಾರು 73.8 ಲಕ್ಷ ರೂ. ಮೌಲ್ಯದ ಉಪಕರಣಗಳನ್ನು ಕಿಮ್ಸ್ ನ ಆಡಳಿತ ಬ್ಲಾಕ್ ನ ನಿರ್ದೇಶಕರ ಕ್ಯಾಬಿನ್ ನಲ್ಲಿ ಹಸ್ತಾಂತರಿಸಲಾಯಿತು.
ಎಲ್ ಟಿಐನಿಂದ ಸಹಾಯ ಪಡೆದು ಕಿಮ್ಸ್ ಗೆ ಅಗತ್ಯ ಇರುವ ಈ ಸಾಧನಗಳನ್ನು ಒದಗಿಸುವ ಸಂಪೂರ್ಣ ಪ್ರಕ್ರಿಯೆಯ ಸಾರಥ್ಯವನ್ನು ದೇಶಪಾಂಡೆ ಪ್ರತಿಷ್ಠಾನ ವಹಿಸಿತ್ತು. ಕಿಮ್ಸ್ ಮತ್ತು ಎಲ್ ಟಿಐ ನಡುವೆ ಸಹಯೋಗ ಏರ್ಪಡಿಸುವುದು, ಉಪಕರಣಗಳ ಖರೀದಿ ಮತ್ತು ಹಸ್ತಾಂತರದ ಕಾರ್ಯಕ್ರಮವನ್ನು ಪ್ರತಿಷ್ಠಾನ ಸಂಘಟಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ದೇಶಪಾಂಡೆ ಪ್ರತಿಷ್ಠಾನದ ಸಿಇಒ ವಿವೇಕ್ ಪವಾರ್, “ರೋಗಿಗಳ ಸಾವನ್ನು ತಡೆಯುವುದಕ್ಕೆ ಮತ್ತು ಶೀಘ್ರ ಗುಣಮುಖಗೊಳಿಸುವುದಕ್ಕೆ ಕಿಮ್ಸ್ ಗೆ ಇಂಥ ಉಪಕರಣಗಳ ಅಗತ್ಯವಿತ್ತು. ಅವರಿಗೆ ಅತ್ಯಾಧುನಿಕ ಆರೋಗ್ಯ ರಕ್ಷಣೆ ನೀಡುವುದಕ್ಕೆ, ಬಡ ರೋಗಿಗಳ ರಕ್ಷಣೆಗೆ ಇವುಗಳನ್ನು ಒದಗಿಸಲಾಗುತ್ತಿದೆ. ಎಲ್ ಟಿಐ ಬಹು ದೀರ್ಘ ಕಾಲದಿಂದ ದೇಶಪಾಂಡೆ ಪ್ರತಿಷ್ಠಾನದ ಪಾಲುದಾರನಾಗಿ ಸಹಕರಿಸುತ್ತಿದೆ.
ಪ್ರತಿಷ್ಠಾನವು ಇಂಥಹುದೊಂದು ತುರ್ತು ಅಗತ್ಯವನ್ನು ಮುಂದಿಟ್ಟಾಗ ಎಲ್ ಟಿಐ ಹೃದಯಪೂರ್ವಕವಾಗಿ ಒಪ್ಪಿ ಇಂಥ ಒಳ್ಳೆಯ ಕೆಲಸವನ್ನು ಬೆಂಬಲಿಸಲು
ಮುಂದಾಯಿತು. ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ಇಂಥ ಜಾಗತಿಕ ಗುಣಮಟ್ಟದ ಆರೋಗ್ಯ ಪರಿಕರಗಳನ್ನು ಒಂದು ಆಸ್ಪತ್ರೆಗೆ ನೀಡಲಾಗುತ್ತಿದೆ. ದೇಶಪಾಂಡೆ ಪ್ರತಿಷ್ಠಾನದ ಎಲ್ಲ ಸಿಬ್ಬಂದಿ ಮತ್ತು ಜಿಲ್ಲೆಯ ನಾಗರಿಕರ ಪರವಾಗಿ, ಕೋವಿಡ್-19 ಸೇರಿದಂತೆ ಎಲ್ಲ ಇತರ ರೋಗಗಳ ವಿರುದ್ಧ ಹೋರಾಡಲು ಕಿಮ್ಸ್ ನ್ನು ಇಂಥ ಉತ್ತಮ ಗುಣಮಟ್ಟದ ಪರಿಕರಗಳೊಂದಿಗೆ ಸಜ್ಜುಗೊಳಿಸಿದ್ದಕ್ಕಾಗಿ ಕೃತಜ್ಞತೆ ಹೇಳುತ್ತೇವೆ ಎಂದರು”.
ಕಿಮ್ಸ್ ನ ನಿರ್ದೇಶಕರಾಗಿರುವ ಡಾ. ರಾಮಲಿಂಗಪ್ಪ ಅವರು ಇಂಥ ಪರಿಕರಗಳನ್ನು ನೀಡಿದ ಎಲ್ ಟಿ ಐ ಮತ್ತು ಇಡೀ ಪ್ರಕ್ರಿಯೆಯ ಸಾರಥ್ಯ ವಹಿಸಿದ ದೇಶಪಾಂಡೆ ಪ್ರತಿಷ್ಠಾನಕ್ಕೆ ಧನ್ಯವಾದ ಹೇಳಿದರು. ಸಾವಿರಾರು ರೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.
ಎಲ್ ಟಿಐನ ಮುಖ್ಯ ಹಣಕಾಸು ಅಧಿಕಾರಿ ಅನಿಲ್ ರಣ್ ಧೀರ್, ಗ್ಲೋಬಲ್ ಕಾರ್ಪೊರೇಟ್ ಸರ್ವೀಸಸ್ ನ ಉಪಾಧ್ಯಕ್ಷರಾದ ಬಿ.ಎಸ್. ಸಲೂಜ, ವಿತರಣೆ ಮತ್ತು ವಿಮಾ ವಿಭಾಗದ ಜಾಗತಿಕ ಮುಖ್ಯಸ್ಥರಾಗಿರುವ ಬೃಜೇಶ್ ಪ್ರಭಾಕರ್, ಸೌಕರ್ಯ ಮತ್ತು ಆಡಳಿತ ವಿಭಾಗದ ನಿರ್ದೇಶಕರಾಗಿರುವ ಅಶೋಕ್ ಕುಮಾರ್, ದೇಶಪಾಂಡೆ ಪ್ರತಿಷ್ಠಾನದ ಸಿಒಒ ಸುನಿಲ್ ಕೆ.ಸಿ., ದೇಶಪಾಂಡೆ ಸ್ಕಿಲ್ಲಿಂಗ್ ನ ಸಿಒಒ ಪಿ.ಎನ್ ನಾಯಕ್, ಕಾರ್ಯಾನುಷ್ಠಾನ ವಿಭಾಗದ ಹಿರಿಯ
ನಿರ್ದೇಶಕರಾದ ವಿಜಯ್ ಪುರೋಹಿತ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
Kshetra Samachara
17/11/2021 09:48 am