ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕ್ಕಮಕ್ಕಳ ವಾರ್ಡ್‌ಗೆ ಚಾಲನೆ

ಧಾರವಾಡ: ಕೊರೊನಾ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯ ವಲಯಕ್ಕೆ 2 ಲಕ್ಷ 23 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ಘಟಕವು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪಿಎಂ ಕೇರ್ಸ್ ನಿಧಿಯಿಂದ ನೂತನವಾಗಿ ನಿರ್ಮಿಸಿರುವ 1000 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ, ಉನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಿದ ಚಿಕ್ಕ ಮಕ್ಕಳ ವಾರ್ಡಿನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೊರೊನಾ ಅಲೆ ಎದುರಿಸಲು ಆಮ್ಲಜನಕ ಘಟಕಗಳ ನಿರ್ಮಾಣಕ್ಕಾಗಿ ಪಿಎಂ ಕೇರ್ಸ್ ನಿಧಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಎಲ್ಲ ರಾಜ್ಯಗಳಿಗೆ ಅನುದಾನ ಒದಗಿಸಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಆರೋಗ್ಯ ವಲಯಕ್ಕೆ 2ಲಕ್ಷ 23 ಸಾವಿರ ಕೋಟಿ ರೂಪಾಯಿ ನೀಡಿದೆ. ದೇಶದ ಎಲ್ಲೆಡೆ ಆರೋಗ್ಯ ಮೂಲ ಸೌಕರ್ಯಗಳು ಅಭಿವೃದ್ಧಿಯಾಗುತ್ತಿವೆ. ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆ 83 ಸಾವಿರ, ಸ್ನಾತಕೋತ್ತರ ಪದವಿಗೆ 54 ಸಾವಿರ ಸೀಟುಗಳನ್ನು ಹೆಚ್ಚಿಸಲಾಗಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ಸಂಖ್ಯೆಯನ್ನು 7 ರಿಂದ 16 ಕ್ಕೆ ಹೆಚ್ಚಿಸಲಾಗಿದೆ. ದಂತ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನೂ ಕೂಡ ಹೆಚ್ಚಿಸಲಾಗಿದೆ. ಕೋವಿಡ್ ಲಸಿಕಾಕರಣ ದೇಶದಲ್ಲಿ ಪರಿಣಾಮಕಾರಿಯಾಗಿ ಸಾಗಿದೆ. ಜನತೆ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸದೇ ಎಚ್ಚರಿಕೆಯಿಂದಿರಬೇಕು ಎಂದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ಆಮ್ಲಜನಕ ಘಟಕ, 26 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಉನ್ನತೀಕರಿಸಿದ ಚಿಕ್ಕ ಮಕ್ಕಳ ವಾರ್ಡನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಮುನ್ನಡೆಸಬೇಕು. ಆಸ್ಪತ್ರೆಗೆ ಬರುವವರ ಸಂಖ್ಯೆ ಕಡಿಮೆಯಾಗಲಿ, ಬಂದವರು ಆರೋಗ್ಯವಂತರಾಗಿ ಸಂತಸದಿಂದ ಮನೆಗೆ ಮರಳುವಂತಾಗಬೇಕು. ಸರ್ಕಾರದ ಕಾರ್ಯಕ್ಕೆ ಅನೇಕ ಕಾರ್ಪೋರೇಟ್ ಸಂಸ್ಥೆಗಳು ಕೈಜೋಡಿಸಬೇಕು, ಹಣವಿರುವ ವ್ಯಕ್ತಿಗಳು, ಸಂಸ್ಥೆಗಳು ಸಾಮಾಜಿಕ ಜನೋಪಯೋಗಿ ಕೆಲಸಗಳಿಗೆ ಉದಾರವಾಗಿ ನೀಡಬೇಕು. ಜಿಲ್ಲಾ ಆಸ್ಪತ್ರೆಯ ನೂತನ ತಾಯಿ ಮಕ್ಕಳ ಆಸ್ಪತ್ರೆಯು ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ತಲೆ ಎತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಧಾರವಾಡಕ್ಕೆ ಅಗತ್ಯವಿದ್ದ ಆಮ್ಲಜನಕ ಉತ್ಪಾದನಾ ಘಟಕ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿರುವುದರ ಹಿಂದೆ ಕೇಂದ್ರ ಸಚಿವರ ಪ್ರಹ್ಲಾದ ಜೋಶಿ ಅವರ ಪ್ರಯತ್ನ ದೊಡ್ಡದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸರ್ಕಾರದ ಜೊತೆಗೆ ದಾನಿಗಳ ನೆರವು ಸಮನ್ವಯಗೊಳಿಸಲು ಪಿ.ಎಂ.ಕೇರ್ಸ್ ನಿಧಿ ಸ್ಥಾಪಿಸಿ ಅನೇಕ ಆರೋಗ್ಯ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲು ಸಾಧ್ಯವಾಗಿದೆ. ಜಿಲ್ಲಾ ಆಸ್ಪತ್ರೆಗೆ ತಲುಪುವ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿ ಪಡಿಸಲು 2.5 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಮೃತ ದೇಸಾಯಿ, ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಮತ್ತಿತರರು ಇದ್ದರು.

Edited By : PublicNext Desk
Kshetra Samachara

Kshetra Samachara

16/10/2021 05:36 pm

Cinque Terre

8.68 K

Cinque Terre

0

ಸಂಬಂಧಿತ ಸುದ್ದಿ